ಪರಿಸರದಲ್ಲಾಗುತ್ತಿರುವ ಏರುಪೇರು ಸರಿಪಡಿಸಲು ನಗರ ಹಸಿರೀಕರಣಗೊಳ್ಳಬೇಕು: ರಾಜೀವ್
ಸಂಜೆವಾಣಿ ನ್ಯೂಸ್
ಮೈಸೂರು.ಮೇ.14:- ನಗರ ಹಸಿರಿನಿಂದ ಕಂಗೊಳಿಸಬೇಕಾದರೆ, ಸಾರ್ವಜನಿಕರು, ಸ್ಥಳೀಯ ಸಂಸ್ಥೆ ಅಧಿಕಾರಿಗಳು, ರಾಜ್ಯ ಸರ್ಕಾರದ ಸಹಕಾರ ಅತೀ ಮುಖ್ಯ ಎಂಬ ಅಭಿಪ್ರಾಯ ಮೈಸೂರು ಗ್ರಾಹಕ ಪರಿಷತ್ (ಮೈಗ್ರಾಪ) ಸಾಮಾನ್ಯ ಸಭೆಯಲ್ಲಿ ವ್ಯಕ್ತವಾಯಿತು. ಮೈಸೂರು ಯಾದವಗಿರಿ ವಿವೇಕಾ ನಂದ ರಸ್ತೆಯ ಮೈಗ್ರಾಪ ಕಚೇರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಹಲವು ಸದಸ್ಯರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ವೇಳೆ ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್ ಮಾತನಾಡಿ, ಮೈಸೂರು ನಗರ ಹಸಿರೀಕರಣಗೊಳಿಸುವ ಸಂಬಂಧ ಈಗಾಗಲೇ ಲಕ್ಷಾಂತರ ಗಿಡಗಳನ್ನು ನೆಡಲಾಗುತ್ತಿದೆ. ಹಾಗೆಯೇ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ಮನೆಗಳಲ್ಲಿ ಸಸಿಗಳನ್ನು ನೆಡಲು ಕೋಟಿ ವೃಕ್ಷ ಅಭಿಯಾನದ ಮೂಲಕ ಲಕ್ಷಾಂತರ ಗಿಡಗಳನ್ನು ವಿತರಿಸಲಾಗುತ್ತಿದೆ ಎಂದರು. ಪರಿಸರದಲ್ಲಾಗುತ್ತಿರುವ ಏರುಪೇರು ಗಳನ್ನು ಸರಿಪಡಿಸಲು ನಗರ ಹೆಚ್ಚು ಹಸಿರೀಕರಣಗೊಳ್ಳಬೇಕು. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವೆಂದರು,
ಮರಗಳನ್ನು ಉಳಿಸಿಕೊಳ್ಳಬೇಕಾದರೆ, ವಿದ್ಯುತ್ ನಿಗಮಗಳ ಮೈಸೂರು ನಗರಪಾಲಿಕೆ ನೌಕರರಿಗೆ ವೈಜ್ಞಾನಿಕವಾಗಿ ಮರಗಳನ್ನು ಕತ್ತರಿಸುವ ಬಗ್ಗೆ ತರಬೇತಿ ನೀಡುವ ಅವಶ್ಯಕತೆ ಇದೆ. ಆದರೆ, ಇದರ ಬಗ್ಗೆ ಯಾವುದೇ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ತಿಳಿಸಿದರು.
ಹಸಿರೀಕರಣದಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಮುಖ್ಯ ನೇರ ಎಂದರಲ್ಲದೆ, ಫುಟ್ ಪಾತ್‍ನಲ್ಲಿ ಹಾಕಿರುವ ಮರಗಳ ಸುತ್ತ ಡಾಂಬರ್ ಅಥವಾ ಸಿಮೆಂಟ್ ಟೈಲ್ಸ್‍ಗಳಿಂದ ಸಂಪೂರ್ಣ ಮುಚ್ಚಲಾಗಿರುತ್ತದೆ. ಇದರಿಂದ ಮರಗಳಿಗೆ ನೀರು ತಲುಪಲು ಅಡ್ಡಿಯಾಗಿ, ಮರದ ಬೇರುಗಳು ದುರ್ಬಲಗೊಂಡು ಬೀಳುವ ಸಾಧ್ಯತೆ ಇದ್ದು, ಇದರ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ ಎಂದರು.
ಪರಿಸರ ತಜ್ಞ ಡಾ.ಶಂಕರ್ ಭಟ್ ಮಾತನಾಡಿ, ಫುಟ್‍ಪಾತ್‍ಗಳಲ್ಲಿ ನೆಟ್ಟಿರುವ ಗಿಡಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕು. ಇದರ ನಿರ್ವಹಣೆ ಕುರಿತು ಆಯಾಯ ಜಿಲ್ಲೆಗಳಲ್ಲಿ ಸ್ಥಳೀಯ ಸಂಸ್ಥೆಗಳೇ ಉತ್ತರದಾಯಿತ್ವ ಹೊಂದಲು ಸರ್ಕಾರ ಮಾರ್ಗದರ್ಶನ ನೀಡಬೇಕು. ಅಲ್ಲದೆ, ಮೈಸೂರು ನಗರದಲ್ಲಿ ಪರಿಸರ ನಿರ್ವಹಣೆ ಕುರಿತು ಮೈಸೂರು ನಗರ ಪಾಲಿಕೆ ಅಧಿಕಾರಿಗಳ ಜವಾಬ್ದಾರಿ ಆಗಿದ್ದರೂ ಅದನ್ನೂ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಬಹುತೇಕ ಸದಸ್ಯರು ದನಿಗೂಡಿಸಿದರು. ಅಲ್ಲದೆ, ನಗರ ಪ್ರದೇಶದಲ್ಲಿ ಸಸಿಗಳನ್ನು ನೆಡಬಹುದು. ಆದರೆ, ಆ ಗಿಡಗಳ ನಿರ್ವಹಣೆ ಹೇಗೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ನಗರ ಪ್ರದೇಶದಲ್ಲಿ ದಿನ ದಿಂದ ದಿನಕ್ಕೆ ಗಿಡ-ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.
ಅರಣ್ಯ ಇಲಾಖೆಯ ಆರ್‍ಎಫ್‍ಓ ಧನ್ಯಶ್ರೀ ಮಾಹಿತಿ ನೀಡಿ, ಮೈಸೂರು ಹಸಿರೀಕರಣ ಮಾಡಲು ಅರಣ್ಯ ಇಲಾಖೆ ಬದ್ಧವಾಗಿದೆ. ಈಗಾಗಲೇ ಲಕ್ಷಾಂತರ ಸಸಿಗಳನ್ನು ನೆಟ್ಟು ಪೆÇೀಷಿಸುತ್ತಿದೆ. ಒಮ್ಮೆ ಸಾರ್ವಜನಿಕ ರಸ್ತೆಗಳಲ್ಲಿ ನೆಟ್ಟರೆ, ಆ ಗಿಡಗಳನ್ನು ಐದು ವರ್ಷಗಳವರೆಗೆ ಪೆÇೀಷಿಸುವುದು ಅರಣ್ಯ ಇಲಾಖೆ ಜವಾಬ್ದಾರಿ. ನಂತರ ಅದರ ನಿರ್ವಹಣೆ ಸ್ಥಳೀಯ ಸಂಸ್ಥೆಗಳು ತೆಗೆದುಕೊಳ್ಳಬೇಕು. ಅದು ಸಾಧ್ಯವಾ ಗುತ್ತಿಲ್ಲ. ಪ್ರಸ್ತುತ 11 ಸಾವಿರಕ್ಕೂ ಹೆಚ್ಚು ನೆಡುವಷ್ಟು ಸಸಿಗಳು ನಮ್ಮ ಇಲಾಖೆಯಲ್ಲಿವೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಈ ವೇಳೆ ಮೈಗ್ರಾಪ ಅಧ್ಯಕ್ಷ ಶ್ರೀಶೈಲಾ ರಾಮಣ್ಣ, ಶೋಭನಾ, ಭಾಮಿ ವಿ.ಶೆಣೈ ಸೇರಿದಂತೆ ಅನೇಕರಿದ್ದರು.