ಉನ್ನತ ಶಿಕ್ಷಣದ ಜೊತೆಗೆ ಕಂಪ್ಯೂಟರ್ ಕಲಿಕೆಯಿಂದ ಉದ್ಯೋಗಾವಕಾಶಗಳು ಹೆಚ್ಚು: ಚಿನ್ನಸ್ವಾಮಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.14- ಶಿಕ್ಷಣದ ಜೊತೆಗೆ ಕಂಪ್ಯೂಟರ್ ತರಬೇತಿ ಪಡೆದುಕೊಂಡರೆ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಲ್ಲಿ ಉದ್ಯೋಗವನ್ನು ಪಡೆದುಕೊಳ್ಳುವುದು ಸುಲಭವಾಗುತ್ತದೆ ಎಂದು ಜೆಎಸ್‍ಎಸ್ ರುಡ್‍ಸೆಟ್ ಸಂಸ್ಥೆಯ ನಿವೃತ್ತ ಸಂಯೋಜಕ ಹಾಗೂ ಸಂಪನ್ಮೂಲ ವ್ಯಕ್ತಿ ಚಿನ್ನಸ್ವಾಮಿ ತಿಳಿಸಿದರು.
ನಗರದ ವಾಸವಿ ಮಹಲ್‍ನಲ್ಲಿ ದೇವಾಂಗ ಬೀದಿಯಲ್ಲಿರುವ ಶ್ರೀ ಕಂಪ್ಯೂಟರ್ಸ್‍ನ 11ನೇ ವಾರ್ಷಿಕೋತ್ಸವ ಹಾಗೂ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲಾ ಕೇಂದ್ರದಲ್ಲಿ ಕಳೆದ 10 ವರ್ಷಗಳಿಂದ ಯಶಸ್ವಿಯಾಗಿ ಕಂಪ್ಯೂಟರ್ ತರಬೇತಿ ನೀಡಿ ಸಾವಿರಾರು ಮಕ್ಕಳಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಂಡಿರುವ ಸಂಸ್ಥೆಯು ಬಹಳ ಹೆಮ್ಮಾರವಾಗಿ ಬೆಳೆಯಲಿ. ಇನ್ನು ಹೆಚ್ಚಿನ ಮಕ್ಕಳು ಕಂಪ್ಯೂಟರ್ ಕಲಿತು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಅವಕಾಶ ಸಂಸ್ಥೆಯಿಂದ ಆಗಲಿ ಎಂದು ಶುಭ ಕೋರಿದರು.
ಇತ್ತೀಚಿನ ದಿನಗಳಲ್ಲಿ ತಂತ್ರಾಜ್ಞಾನ ಮತ್ತು ಡಿಜಿಟಲಿಕರಣದಿಂದಾಗಿ ಕಂಪ್ಯೂಟರ್ ಕಲಿಕೆಗೆ ಹೆಚ್ಚಿನ ಅವಕಾಶಗಳು ಇವೆ. ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಪ್ರಥಮ ಹಂತದ ಜ್ಞಾನವಾಗಿದೆ. ಶಾಲಾ ಹಂತಗಳಲ್ಲಿಯೇ ಕಂಪ್ಯೂಟರ್ ಕಲಿಕಗೆ ಹೆಚ್ಚಿನ ಅದ್ಯತೆ ನೀಡಲಾಗಿತ್ತಿದೆ. ಗ್ರಾಮಾಂತರ ಪ್ರದೇಶ ಮಕ್ಕಳು ಎಸ್‍ಎಸ್‍ಎಲ್‍ಸಿ, ಪಿಯುಸಿ ಪೂರ್ಣವಾಗುತ್ತಿದ್ದಂತೆ ಪದವಿ ಜೊತೆಗೆ ಇಂಥ ಸಂಸ್ಥೆಗಳಲ್ಲು ಕಂಪ್ಯೂಟರ್ ತರಬೇತಿ ಪಡೆದುಕೊಂಡು ಕೌಶಲ್ಯಾಭಿವೃದ್ದಿಯನ್ನು ಪಡೆದು ಅರ್ಜಿ ಸಲ್ಲಿಸಿದರೆ. ಕೆಲಸ ಗ್ಯಾರಂಟಿಯಾಗಲಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿರುವ ಹೆಣ್ಣು ಮಕ್ಕಳು ಸ್ವಾವಲಾಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಚಿನ್ನಸ್ವಾಮಿ ಕಿವಿಮಾತು ಹೇಳಿದರು.
ಉದ್ಯೋಗಂ ಪುರುಷ ಲಕ್ಷಣಂ ಎಂಬ ಕಾಲ ಹೋಗಿದೆ. ಹೆಣ್ಣು, ಗಂಡು ಬೇಧವಿಲ್ಲದೇ ಎಲ್ಲರು ಸಮಾನವಾಗಿ ವಿದ್ಯೆ, ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇಬ್ಬರು ಸಹ ಎಲ್ಲಾ ರಂಗದಲ್ಲಿಯು ಪ್ರಬಲ್ಯವನ್ನು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಮಕ್ಕಳು ಸ್ವಂತ ಉದ್ಯೊಗ ಹಾಗೂ ಕಂಪನಿಗಳಲ್ಲಿ ಕೆಲಸ ಪಡೆದುಕೊಳ್ಳುವಷ್ಟು ಮಟ್ಟಕ್ಕೆ ಕಂಪ್ಯೂಟರ್ ಹಾಗು ಆಂಗ್ಲ ಭಾಷೆಯ ಪರಿಣಿತಿಯನ್ನು ಹೊಂದಿರಬೇಕು. ಇದನ್ನು ತಾವೆಲ್ಲರು ಸಾಧಿಸಿಕೊಂಡು ಅಭಿವೃದ್ದಿಯತ್ತ ಮುನ್ನಡೆಯಬೇಕು ಎಂದು ಚಿನ್ನಸ್ವಾಮಿ ವೃತ್ತಿ ಜೀವನ ಹಾಗೂ ಬದುಕುವ ಅತ್ಮಸ್ಥೈರ್ಯ ಕುರಿತು ಮಕ್ಕಳಿಗೆ ತಿಳಿಸಿದರು.
ಶ್ರೀ ಕಂಪ್ಯೂಟರ್ ಸಂಸ್ಥೆಯ ವ್ಯವಸ್ಥಾಪಕ ಬಿ. ವೆಂಕಟೇಶ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 10 ವರ್ಷಗಳಿಂದ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಕಂಪ್ಯೂಟರ್ ತರಬೇತಿ ನೀಡುವ ಮೂಲಕ ಯುವ ಜನಾಂಗದ ಸಬಲೀಕರಣಕ್ಕಾಗಿ ಶ್ರಮಿಸಲಾಗುತ್ತಿದೆ. ಸರ್ಕಾರದ ಯಾವುದೇ ನೆರವು ಪಡೆದುಕೊಳ್ಳದೇ ಸ್ವಂತಿಕೆ ಹೊಂದಿಗೆ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡಬೇಕೆಂಬ ಆಶಯಕ್ಕೆ ಎಲ್ಲರ ಸಹಕಾರ ಮುಖ್ಯವಾಗಿದೆ. 200ಕ್ಕು ಹೆಚ್ಚು ವಿದ್ಯಾರ್ಥಿಗಳು ತರಬೇತಿಯನ್ನು ಪಡೆದು, ಸ್ವಂತ ಉದ್ಯೋಗ ಹಾಗೂ ಕಂಪನಿಗಳಿಗೆ ಸೇರಿರುವ ಮೂಲಕ ಜೀವನ ವನ್ನು ರೂಪಿಸಿಕೊಳ್ಳಲು ಮುಂದಾಗಿದ್ದಾರೆ. ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗಿರಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಕಂಪ್ಯೂಟರ್ಸ್‍ನ ಸಂಚಾಲಕರಾದ ರಾಜಲಕ್ಷ್ಮಿ, ನವೀನ್, ಯಶಸ್ವಿನಿ, ಶಿಕ್ಷಕರಾದ ಶೃತಿ, ಮೌನ, ಹಾಗೂ ಶಿಬಿರಾರ್ಥಿಗಳು ಇದ್ದರು.