ಬರಗಾಲ ಘೋಷಣೆ ಹಿನ್ನೆಲೆ:2.63 ಲಕ್ಷ ರೈತರಿಗೆ 274.51 ಕೋಟಿ ರೂ. ಬೆಳೆ ಪರಿಹಾರ ನೀಡಲು ಡಿ.ಸಿ. ಅನುಮೋದನೆ
ಕಲಬುರಗಿ:ಮೇ.13: ಕಳೆದ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟ ಕಾರಣ ಜಿಲ್ಲೆಯ ಎಲ್ಲಾ 11 ತಾಲ್ಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕುಗಳೆಂದು ಸರ್ಕಾರ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಎನ್.ಡಿ‌.ಆರ್.ಎಫ್ ಮಾರ್ಗಸೂಚಿಯಂತೆ ಜಿಲ್ಲೆಯ 2,63,393 ರೈತರಿಗೆ 274.51 ಕೋಟಿ ರೂ. ಇನ್ಪುಟ್ ಸಬ್ಸಿಡಿ ಬೆಳೆ ಪರಿಹಾರ ನೀಡಲು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಅನುಮೋದನೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರದ ಮೇರೆಗೆ ಪ್ರೂಟ್ಸ್ ಐ.ಡಿ. ಹೊಂದಿರುವ ಮತ್ತು ಪಹಣೆ ಜೋಡಣೆಯಾಗಿರುವ 2,82,010 ರೈತರಿಗೆ ಈಗಾಗಲೆ ಡಿ.ಬಿ.ಟಿ ಮೂಲಕ ಎಸ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ಮೊದಲನೆ ಕಂತಾಗಿ ಗರಿಷ್ಠ 2000 ರೂ. ಗಳಂತೆ 56.02 ಕೋಟಿ ರೂ. ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಲಾಗಿದ್ದು, ಇದರೊಂದಿಗೆ ಇಂದು ನೀಡಲಾಗಿರುವ ಅನುಮೋದನೆ ಸೇರಿದಂತೆ ಒಟ್ಟಾರೆ ಎರಡು ಹಂತದಲ್ಲಿ ಇದೂವರೆಗೆ ಜಿಲ್ಲೆಯ 2,82,010 ರೈತರಿಗೆ 330.53 ಕೋಟಿ ರೂ. ಖಾತೆಗೆ ಜಮೆ ಮಾಡಿದಂತಾಗಲಿದೆ‌ ಎಂದು ಅವರು ತಿಳಿಸಿದ್ದಾರೆ.
ಇನ್ನೂ ಬೆಳೆ ಹಾನಿ ಪರಿಹಾರ ಹಣ ಖಾತೆಗೆ ಜಮಾ ಆಗದೇ ಇರುವ ಬಗ್ಗೆ ರೈತರು ದೂರುಗಳನ್ನು ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ಜಿಲ್ಲಾ ಮತ್ತು ತಾಲ್ಲೂಕುವಾರು ಸಹಾಯವಾಣಿಗಳನ್ನು ತೆರೆಯಲಾಗಿದ್ದು, ಕಚೇರಿ ಸಮಯದಲ್ಲಿ ಸಂಪರ್ಕಿಸಿ ಇದರ ಲಾಭ ಪಡೆಯುವಂತೆ ರೈತರಲ್ಲಿ ಡಿ.ಸಿ. ಅವರು ಮನವಿ ಮಾಡಿದ್ದಾರೆ.
ಸಹಾಯವಾಣಿ ಸಂಖ್ಯೆಗಳು:
ಡಿ.ಸಿ. ಕಚೇರಿ-1077, ಆಳಂದ-9845858252, ಅಫಜಲಪೂರ-7760208044/ 7760605777, ಚಿತ್ತಾಪೂರ 08474-236250, ಚಿಂಚೋಳಿ 08475-200138/ 200127, ಕಾಳಗಿ-9243866424, ಕಲಬುರಗಿ 08472-278636/ 9980683702, ಕಮಲಾಪೂರ 08478-200144, ಜೇವರ್ಗಿ 7411843393/ 7019270898, ಯಡ್ರಾಮಿ 9743682346, ಶಹಾಬಾದ 08474-295910 ಹಾಗೂ ಸೇಡಂ 08441-276038.
ಫ್ರೂಟ್ಸ್ ನೋಂದಣಿ ಕಡ್ಡಾಯ:
ಬೆಳೆ ಹಾನಿ ಪರಿಹಾರ ಪಡೆದುಕೊಳ್ಳಲು ಪ್ರೂಟ್ಸ್ ಗೆ ಪಹಣಿ ಜೋಡಣೆ ಕಡ್ಡಾಯವಾಗಿರುವುದರಿಂದ ಇದುವರೆಗೂ ಫ್ರೂಟ್ಸ್ ನೋಂದಣಿ ಮಾಡಿಕೊಳ್ಳದ ರೈತರು ತಮ್ಮ ಆಧಾರ್, ಪಹಣಿ ಹಾಗೂ ಬ್ಯಾಂಕ್ ಪಾಸ್ ಬುಕ್ ದಾಖಲೆಗಳನ್ನು ತೆಗೆದುಕೊಂಡು ಹತ್ತಿರದ ಕಂದಾಯ, ಕೃಷಿ ಅಥವಾ ತೋಟಗಾರಿಕೆ ಇಲಾಖೆಗಳ ಕಛೇರಿಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಇಲ್ಲದಿದಲ್ಲಿ ಅಂತಹ ರೈತರು ಬೆಳೆ ಪರಿಹಾರಕ್ಕೆ ಅರ್ಹರಾಗುವುದಿಲ್ಲವೆಂದು ಡಿ.ಸಿ. ಅವರು ಸ್ಪಷ್ಟಪಡಿಸಿದ್ದಾರೆ.