ಕುಡಿಯಲು ಯೋಗ್ಯ ನೀರು ಪೂರೈಕೆಗೆ ಒತ್ತಾಯ
ಕಲಬುರಗಿ:ಮೇ.13:ನಗರದ ಜನಗಳಿಗೆ, ಕುಡಿಯಲು ಹಾಗೂ ಬಳಸಲು ಶುದ್ಧಿಕರಿಸಿದ ನೀರಿನ್ನು ಒದಗಿಸಲು ಆಗ್ರಹಿಸಿ ಹಾಗೂ ನೀರಿನ ಸಮಸ್ಯೆಯನ್ನು ವೈಜ್ಞಾನಿಕವಾಗಿ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ನಗರ ಕಾರ್ಯದರ್ಶಿ ಎಸ್.ಎಂ. ಶರ್ಮಾ ಅವರು ಮಹಾನಗರ ಪಾಲಿಕೆಯ ಆಯುಕ್ತ ಭುವನೇಶ್ ಪಾಟೀಲ್ ಅವರಿಗೆ ಕೋರಿದರು.
ಸೋಮವಾರ ಪಕ್ಷದ ನಿಯೋಗದ ನೇತೃತ್ವ ವಹಿಸಿ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದ ಅವರು, ಜಿಲ್ಲೆಯಲ್ಲಿ ಬಿಸಿಲಿನ ತಾಪ 45 ಡಿಗ್ರಿ ಏರುತ್ತಿದ್ದು ಕುಡಿಯುವ ಹಾಗೂ ದಿನನಿತ್ಯ ಬಳಸುವ ನೀರಿನ ಸಮಸ್ಯೆ ಅತ್ಯಂತ ಗಂಭೀರವಾಗಿದೆ. ನಗರದಲ್ಲಿ ಈಗಾಗಲೇ ಇರುವ ಬಹುತೇಕ ಬೋರವೆಲ್ಲುಗಳು ಬತ್ತಿ ಹೋಗಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಇಂತಹ ಭೀಕರ ಪರಿಸ್ಥಿತಿಯಲ್ಲಿ ನಗರದಾದ್ಯಂತ ಜನ ಮಹಾನಗರ ಪಾಲಿಕೆಯ ನೀರಿನ ಮೇಲೆಯೇ ಅವಲಂಬಿತರಾಗಿದ್ದಾರೆ. ವಾರಕ್ಕೊಂದು ಬಾರಿ ಬರುವ ನೀರು ಕೂಡ ಹೊಲಸು ದುರ್ನಾತ ಬೀರುತ್ತಿದೆ. ಚರಂಡಿ ನೀರು ಮಿಶ್ರಿತವಾಗಿ ಹುಳಗಳು ಸಹ ನೀರಿನಲ್ಲಿ ಬರುತ್ತಿವೆ. ಇಡೀ ನಗರಕ್ಕೆ ಹಾಗೂ ಸ್ಲಂ ನಗರಗಳಿಗೆ ಬಟ್ಟೆ – ಪಾತ್ರೆಗಳು ಸ್ವಚ್ಛಗೊಳಿಸಲು ಯೋಗ್ಯವಲ್ಲದ ನೀರು ಬಿಡಲಾಗುತ್ತಿದೆ. ಜನಗಳು ಸ್ನಾನಕ್ಕೆ, ಅಡುಗೆಗೆ, ಪಾತ್ರೆ ತೊಳೆಯಲು ಸಹ ಇದೆ ನೀರನ್ನು ಅನಿವಾರ್ಯವಾಗಿ ಬಳಸುತ್ತಿದ್ದಾರೆ. ಜನಗಳಿಗೆ ಕನಿಷ್ಠ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡಬೇಕಾದ ಮಹಾನಗರ ಪಾಲಿಕೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅವರು ಟೀಕಿಸಿದರು.
ಅಶುದ್ಧ ನೀರಿನಿಂದ ಸೇವನೆಯಿಂದ ಈಗಾಗಲೇ ಹಲವಾರು ವೃದ್ಧರು ಮಕ್ಕಳು ಹೊಟ್ಟೆ ನೋವು, ಬೇಧಿ, ಡೇಂಗು, ಮಲೇರಿಯಾಗಳಂತಹ ರೋಗಗಳಿಗೆ ನಗರದ ಜನಗಳು ತುತ್ತಾಗಿ ಆಸ್ಪತ್ರೆ ಸೇರುತ್ತಿದ್ದಾರೆ. ಜನಗಳು ಅನಿವಾರ್ಯವಾಗಿ ಹೆಚ್ಚಿನ ದುಡ್ಡು ಕೊಟ್ಟು ಖಾಸಗಿಯವರು ಶುದ್ಧ ಕುಡಿಯುವ ನೀರಿನ ಘಟಕಗಳ ಮೊರೆ ಹೋಗುತ್ತಿದ್ದಾರೆ. ಒಂದೆಡೆ ನಗರ ಪಾಲಿಕೆಗೂ ನೀರಿಗೆ ಹಣ ನೀಡುತ್ತಿದ್ದಾರೆ. ಇನ್ನೊಂದೆಡೆ ಖಾಸಗಿ ನೀರಿನ ಶುದ್ಧೀಕರಣ ಘಟಕಗಳಿಗೂ ಹಣ ನೀಡುತ್ತಿದ್ದಾರೆ. ಸಾಮಾನ್ಯ ಜನಗಳ ಇಂತಹ ಭೀಕರ ಪರಿಸ್ಥಿತಿಗೆ ಮಹಾನಗರ ಪಾಲಿಕೆಯ ಸಂಪೂರ್ಣ ಬೇಜವಾಬ್ದಾರಿತನವೇ ಕಾರಣವಾಗಿದೆ ಎಂದು ಅವರು ಖಂಡಿಸಿದರು.
ಕೂಡಲೇ ಸಮಸ್ಯೆಯ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಅಧಿಕಾರಿಗಳು ಸಮರ್ಪಕವಾಗಿ, ವೈಜ್ಞಾನಿಕವಾಗಿ ಶುದ್ಧಿಕರಿಸಿದ ನೀರನ್ನು ಮಾತ್ರ ಜನಗಳಿಗೆ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದ ಅವರು, ಚರಂಡಿ ನೀರು ಎಲ್ಲೆಲ್ಲಿ ಸೇರ್ಪಡೆಯಾಗುತ್ತಿವೆಯೋ ಅದನ್ನ ಈ ಕೂಡಲೇ ಪತ್ತೆ ಹಚ್ಚಿ ಸರಿಪಡಿಸಬೇಕು. ಈಗಾಗಲೇ ಸಾರ್ವಜನಿಕ ಹಣದಿಂದ ಹಲವಾರು ಪ್ರದೇಶಗಳಲ್ಲಿ ಸ್ಥಾಪಿಸಿರುವ ಕುಡಿಯುವ ಫಿಲ್ಟರ್ ನೀರಿನ ವ್ಯವಸ್ಥೆ ಹಲವಾರು ಕಾರಣಗಳಿಂದ ಸ್ಥಗಿತಗೊಂಡಿವೆ. ಕೂಡಲೇ ಇವುಗಳನ್ನು ಪುನಃ ಪ್ರಾರಂಭಿಸಬೇಕು. ಮತ್ತು ಶುದ್ಧಿಕರಿಸುವ ಘಟಕಗಳ ವ್ಯವಸ್ಥೆ ಇಲ್ಲದಿರುವ ಏರಿಯಗಳಲ್ಲಿ ಫಿಲ್ಟರ್ ಘಟಕಗಳ ವ್ಯವಸ್ಥೆ ಕಲ್ಪಿಸಬೇಕು. ಬಂದ್ ಆಗಿರುವ ಬೋರ್‍ವೆಲ್ಲುಗಳನ್ನು ಕೂಡಲೇ ರಿಪೇರಿ ಮಾಡಲು ಕೂಡಲೇ ಮಹಾನಗರ ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಗರದ ಜನಗಳಿಗೆ ಸಮರ್ಪಕವಾಗಿ ಬಳಸಲು ಯೋಗ್ಯವಾಗಿರುವ ಶುದ್ಧ ನೀರು ಒದಗಿಸುವಂತೆ, ಅವಶ್ಯಕತೆ ಇರುವ ಪ್ರತಿಯೊಂದು ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಂದರೆ ಫಿಲ್ಟರ್ ನೀರಿನ ವ್ಯವಸ್ಥೆ ಕಲ್ಪಿಸುವಂತೆ, ಈಗಾಗಲೇ ಸ್ಥಗಿತಗೊಂಡಿರುವ ಫಿಲ್ಟರ್ ನೀರಿನ ವ್ಯವಸ್ಥೆ ಪುನಃ ಪ್ರಾರಂಭಿಸುವಂತೆ, ಹಲವಾರು ನಗರಗಳಲ್ಲಿ ಬೋರ್ವೆಲ್‍ಗಳ ವ್ಯವಸ್ಥೆ ಕಲ್ಪಿಸಿ ಮತ್ತು ಹಾಳಾಗಿರುವ ಬೋರ್ವೆಲ್‍ಗಳನ್ನು ಕೂಡಲೇ ರಿಪೇರಿ ಮಾಡಿಸುವಂತೆ ಅವರು ಒತ್ತಾಯಿಸಿದರು.
ಚರಂಡಿ ನೀರನ್ನು ಯಾವುದೇ ಕಾರಣಕ್ಕೂ ದಿನಬಳಕೆಯ ನೀರಿಗೆ ಸೇರಲು ಬಿಡದೆ ಅದನ್ನು ವೈಜ್ಞಾನಿಕವಾಗಿ ಪರಿಹರಿಸುವಂತೆ, ಹನುಮಾನ್ ನಗರದಲ್ಲಿ ಬೋರ್‍ವೆಲ್ ರಿಪೇರಿ ಮಾಡುವಂತೆ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ರಿಪೇರಿ ಕೈಗೊಳ್ಳುವಂತೆ, ಕೆಸರಟಿಗಿ ಹತ್ತಿರ ಇರುವ ಏಕತಾ ಕಾಲೋನಿಯಲ್ಲಿ ಬೊರ್ವೆಲ್ಲ ಹಾಕಿಸುವಂತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ, ರಾಮ ನಗರ, ಇಂದಿರಾ ನಗರ, ವೆಂಕಟೇಶ್ ನಗರ ಮತ್ತು ಸ್ಟೇಷನ್ ಏರಿಯಾ, ಬ್ರಹ್ಮಪೂರದಲ್ಲಿ ಸರಿಯಾದ ಸಮಯಕ್ಕೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವಂತೆ, ಹರಿಕೃಷ್ಣ ನಗರದಲ್ಲಿ ಕುಡಿಯುವ ನೀರು ಸರಬರಾಜು ಕೈಗೊಳ್ಳುವಂತೆ ಅವರು ಆಗ್ರಹಿಸಿದರು.
ಪಾಲಿಕೆಯ ಆಯುಕ್ತ ಪಾಟೀಲ್ ಭುವನೇಶ್ ದೇವಿದಾಸ್ ಮತ್ತು ಉಪ ಆಯುಕ್ತ ಆರ್.ಪಿ. ಜಾಧವ್ ಅವರಿಗೆ ನಿಯೋಗದ ಸದಸ್ಯರು ನಗರದ ನೀರಿನ ಸಮಸ್ಯೆಯ ಕುರಿತು ಚರ್ಚಿಸಿದರು. ಫಿಲ್ಟರ್ ಘಟಕವನ್ನು ಶುದ್ಧಿಕರಿಸಲಾಗಿದೆ. ಇನ್ನೂ ಮುಂದೆ ಶುದ್ಧವಾದ ನೀರು ನಗರಕ್ಕೆ ಸರಬರಾಜು ಮಾಡಲಾಗುವುದು ಮತ್ತು ಹನುಮಾನ್ ನಗರದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಎರಡು ದಿನಗಳಲ್ಲಿ ರಿಪೇರಿ ಮಾಡಲಾಗುವುದು. ವಿವಿಧ ಬಡಾವಣೆಗಳಲ್ಲಿನ ನೀರಿನ ಸಮಸ್ಯೆ ಬಗಿ ಹರಿಸುವುದಾಗಿ ಆಯುಕ್ತರು ಭರವಸೆ ನೀಡಿದರು. ನಿಯೋಗದಲ್ಲಿ ಪಕ್ಷದ ಜಿಲ್ಲಾ ಸದ್ಯಸರಾದ ಕಾ. ಹಣಮಂತ್ ಎಸ್.ಹೆಚ್., ಕಾ. ಈಶ್ವರ್. ಕಾ. ಭೀಮಾಶಂಕರ್ ಆಂದೋಲ. ಕಾ. ಸಾಬಮ್ಮ ಮುಂತಾದವರು ಪಾಲ್ಗೊಂಡಿದ್ದರು.