ಜವಳಿ ಪಾರ್ಕ ಪ್ರಸ್ತಾವ ರದ್ದು ಮಾಡಲು ಆಗ್ರಹಿಸಿ ಮನವಿ
ಬಸವನಬಾಗೇವಾಡಿ ಸೆ.೨೩:ತಾಲೂಕಿನ ನಾಗೂರ ಗ್ರಾಮದ ಗೋಮಾಳ ಜಮೀನಿನ ೧೫ ಎಕರೆ ಜಾಗೆಯಲ್ಲಿ ಜವಳಿ ಪಾರ್ಕ್ ನಿರ್ಮಾಣದ ಪ್ರಸ್ತಾವವನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿ ಶನಿವಾರ ಗ್ರಾಮಸ್ಥರು ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಶಿರಸ್ತೇದಾರ ಬೋರಮ್ಮ ಪೋಲೇಶಿ ಅವರಿಗೆ ಮನವಿ ಸಲ್ಲಿಸಿದ್ದರು.
ಅವರು ಸಲ್ಲಿಸಿದ ಮನವಿಯಲ್ಲಿ ಗ್ರಾಮದ ೨೮ ಎಕರೆ ಗೋಮಾಳ ಜಾಗೆಯಲ್ಲಿ ಸರ್ಕಾರಿ ಪ್ರೌಢಶಾಲೆ ನಿರ್ಮಾಣ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವಸತಿ ನಿಲಯ, ನಾಗೂರ ತಾಂಡಾ ಜನರ ಅನುಕೂಲಕ್ಕಾಗಿ ಸ್ಮಶಾನಕ್ಕೆ ಮೀಸಲಿದೆ. ಕುಡಿವ ನೀರಿನ ಅನುಕೂಲಕ್ಕಾಗಿ ತೆರೆದ ಬಾವಿ ತೆಗೆಯಲು ಇದೇ ಜಾಗದ ಅಗತ್ಯವಿದೆ. ಈ ಎಲ್ಲ ಅಗತ್ಯ ಕೆಲಸಗಳಿಗೆ ೮ ಎಕರೆ ಜಮೀನು ಹೋಗಿದೆ. ಇನ್ನುಳಿದ ೧೫ ಎಕರೆಯಲ್ಲಿ ಜವಳಿ ಪಾರ್ಕ್ ಮಾಡಿದರೆ ನಮ್ಮೂರಿನ ದನ-ಕರುಗಳಿಗೆ ಜಾಗ ಇಲ್ಲದಾಗಿ ತೊಂದರೆಯಾಗುತ್ತದೆ. ಜವಳಿ ಪಾರ್ಕ್ ನಿರ್ಮಾಣ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಮುಖಂಡರಾದ ಶಿವಾನಂದ ಡೋಣೂರ, ಚಂದ್ರಶೇಖರ ಮರೋಳ, ಚಂದ್ರಶೇಖರ ಮುಳವಾಡ, ಬಸಯ್ಯ ಶೀಕಳವಾಡಿ ಅಮರಯ್ಯ ಹಿರೇಮಠ, ಧರ್ಮಣ್ಣ ಪೂಜಾರಿ, ಕರೆಪ್ಪ ಮಣಗೂರು, ಬಂದೇನಮಾಜ ವಾಲೀಕಾರ, ಮಲ್ಲಪ್ಪ ಪೂಜಾರಿ, ಶ್ರೀಶೈಲ ಮಸೂತಿ, ಮಲ್ಲಪ್ಪ ಭದ್ರಗೊಂಡ, ಯಮನಪ್ಪ ಪೂಜಾರಿ, ಶರಣಪ್ಪ ನಾಲತವಾಡ ಇದ್ದರು.