ಪಿಡಿಓ ಅಮಾನತ್ತಿಗೆ ಆಗ್ರಹ
ಚಿಟಗುಪ್ಪ:ಮೇ.13:ರೆಡ್ಡಿ ಸಮಾಜಕ್ಕೆ ಅಗೌರವ ತೋರಿರುವ ನಿರ್ಣ ಗ್ರಾಮ ಪಂಚಾಯತ್ ಪಿಡಿಒ ಅಶ್ವಿನಿ ಯವರನ್ನು ತಕ್ಷಣ ಅಮಾನತ್ತು ಮಾಡಬೇಕು ಎಂದು ರೆಡ್ಡಿ ಸಮಾಜ ಮುಖಂಡರು ಸರ್ಕಾರಕ್ಕೆ ಅಗ್ರಹಿಸಿದ್ದಾರೆ.
ಶುಕ್ರವಾರ ದಿ 10 ರಂದು ಜಗಜ್ಯೋತಿ ಬಸವೇಶ್ವರ ಹಾಗೂ ಮಹಾಸ್ವಾಧಿ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಗೌರವಪೂರ್ಣವಾಗಿ ಆಚರಿಸಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ ಕೂಡ ಗ್ರಾಮ ಪಂಚಾಯತ್ ಪಿಡಿಒ ಜಯಂತಿಗೆ ಮಾಹಿತಿ ನೀಡದೇ ಗೈರು ಹಾಜರಾಗುವ ಮೂಲಕ ಅಗೌರವ ತೋರಿದ್ದಾರೆ, ಇದಕ್ಕಿಂತ ವಿಷಾದದ ಸಂಗತಿ ಎಂದರೆ ಗ್ರಾಮ ಪಂಚಾಯತ್ ನಲ್ಲಿ ಹೇಮರೆಡ್ಡಿ ಮಲ್ಲಮ್ಮರ ಫೆÇೀಟೋ ಇರದ ಕಾರಣ ಧಾರವಾಡ ಜಿಲ್ಲೆಯ ಹೆಸರಿನ ಯಾವುದೋ ಕ್ಯಾಲೆಂಡರ್ ನ ಮೇಲಿದ್ದ ಹಳೆಯದಾದ ಹೇಮರೆಡ್ಡಿ ಮಲ್ಲಮ್ಮನ ಭಾವಚಿತ್ರವನ್ನು ಕಿತ್ತು ತಂದು ಕಾಟಾಚಾರಕ್ಕೆ ಜಯಂತಿ ಆಚರಿಸಿದ್ದಾರೆ.
ಜಯಂತಿ ಅಂಗವಾಗಿ ಗ್ರಾಮದಲ್ಲಿರುವ ಹೇಮರೆಡ್ಡಿ ಮಲ್ಲಮ್ಮ ಮಂದಿರ ಪರಿಸರದಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸುವಂತೆ ಎಂಟು ದಿನಗಳ ಹಿಂದೆ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದರೂ ನಮ್ಮ ಮನವಿಗೆ ಸ್ಪಂದನ ನೀಡದ ಪಿಡಿಒ ಜಯಂತಿಗೆ ಮಾಹಿತಿ ನೀಡದೇ ಗೈರು ಹಾಜರಾಗಿದ್ದಾರೆ.
ಸ್ವಾಭಿಮಾನಿ ರೆಡ್ಡಿ ಸಮಾಜಕ್ಕೆ ಅಗೌರವ ತೋರಿರುವ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯನ್ನು ತಕ್ಷಣ ಅಮಾನತ್ತು ಮಾಡುವಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು. ಕ್ರಮ ಜರುಗಿಸದಿದ್ದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪ್ರತಿಭಟನೆ ನಡೆಸಲಾಗುವುದು ಎಂದು ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಜಗನ್ನಾಥ ರೆಡ್ಡಿ ಎಖೆಳ್ಳಿ, ಗ್ರಾಪಂ ಮಾಜಿ ಅಧ್ಯಕ್ಷ ಯಾಮರೆಡ್ಡಿ, ಗ್ರಾಪಂ ಸದಸ್ಯ ಪೇಂಟ್ ರೆಡ್ಡಿ ಸೇರಿದಂತೆ ರೆಡ್ಡಿ ಸಮಾಜದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಘಟನೆಗೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯತ್ ಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಿವಲೀಲಾ ತಿಳಿಸಿದ್ದಾರೆ.