ಶ್ರೀರಾಮೋತ್ಸವ ಭವ್ಯ ಮೆರವಣಿಗೆ ಯುವಕರಿಂದ ರಕ್ತದಾನ ಶಿಬಿರ
ಆಳಂದ:ಮೇ.13: ಪಟ್ಟಣದಲ್ಲಿ ಶ್ರೀರಾಮ ಸೇನೆ ತಾಲೂಕು ಘಟಕದ ಅಧ್ಯಕ್ಷ ಈರಣ್ಣಾ ಬಿ. ಹತ್ತರಕಿ ನೇತೃತ್ವದಲ್ಲಿ ಆಯೋಜಿಸಿದ್ದ ಶ್ರೀರಾಮೋತ್ಸವ ಪ್ರತಿಮೆ ಮೆರವಣಿಗೆ ಹಾಗೂ ಯುವಕರಿಂದ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.
ನಗರದ ಹೃದಯ ಭಾಗದಲ್ಲಿರುವ ಶ್ರೀರಾಮ ಮಾರುಕಟ್ಟೆಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 37 ಯುವಕರು ರಕ್ತದಾನ ಕೈಗೊಂಡರು. ಬಳಿಕ ಬಸ್ ನಿಲ್ದಾಣ ರಜ್ವಿರೋಡ್, ಹಳೆಯ ತಹಸೀಲ್ದಾರ ಕಚೇರಿಯಿಂದ ಮುಖ್ಯ ರಸ್ತೆಯ ಮೂಲಕ ಮಾರುಕಟ್ಟೆವರೆಗೆ ಶ್ರೀರಾಮನ ಮೂರ್ತಿಯ ಮೆರವಣಿಗೆ ಗೊಳ್ಳಲಾಯಿತು. ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಎಸ್. ಗುತ್ತೇದಾರ ಮೆರವಣಿಗೆ ಚಾಲನೆ ನೀಡಿದರು. ಮರೆವಣಿಗೆಯೂದ್ದಕ್ಕೂ ಡಿಜೆ ಸದ್ದಿನೊಂದಿಗೆ ಯುವಕರು ನೃತ್ಯ ಮೂಲಕ ಶ್ರೀರಾಮ ಜೈರಾಮ ಘೋಷಣೆಯೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಜೆಡಿಎಸ್ ನಾಯಕಿ ಮಹೇಶ್ವರಿ ವಾಲಿ, ಕಲಬುರಗಿಯ ದಿವ್ಯಾ ಹಾಗರಗಿ, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಹೇಶ ಗೊಬ್ಬುರೆ, ತಾಲೂಕು ಅಧ್ಯಕ್ಷ ಈರಣ್ಣಾ ಬಿ. ಹತ್ತರಕಿ, ಉಪಾಧ್ಯಕ್ಷ ಸದಾನಂದ ಪವಾರ, ನ್ಯಾಯವಾದಿ ಬಿ.ವಿ. ಪಾಟೀಲ, ಮಿಥುನ ರಾಠೋಡ, ಶ್ರೀಶೈಲ ಹೊಸಳ್ಳಿ, ರವಿ ಹತ್ತರಕಿ, ಪ್ರದೀಪ ಗಾಳೆ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.