ಕಬ್ಬಿನ ಬೆಳೆ ಬಿಟ್ಟು ಬೇಸಿಗೆಯಲ್ಲೂ ಬೆಳೆದ ಅಲ್ಪಾವಧಿ ಎಳ್ಳು ಬಂಪರ್
ಆಳಂದ:ಮೇ.13: ಹಲವು ವರ್ಷಗಳಿಂದ ಕಬ್ಬು ಬೆಳೆಯನ್ನೇ ಆಶ್ರಯಿಸಿದ್ದ ತಾಲೂಕಿನ ಕೊರಳ್ಳಿ ಗ್ರಾಮದ ರೈತರೊಬ್ಬರು ಇದೇ ಸಲ ಹೊಸ ಪ್ರಯೋಗಕ್ಕಿಳಿದು ಅಪರೂಪವಾಗಿ ಬೇಸಿಗೆಯಲ್ಲಿ ಎಳ್ಳು ಬಿತ್ತನೆ ಕೈಗೊಂಡು ಅಧಿಕ ಉತ್ಪಾದನೆ ನಿರೀಕ್ಷೆಯಲ್ಲಿದ್ದಾರೆ.
ಗ್ರಾಮದ ಅಣ್ಣಯ್ಯಾ ಸ್ವಾಮಿ ಅವರು ತಮ್ಮ ಮೂರು ಎಕರೆ ಜಮೀನಿನಲ್ಲಿ ಇದೇ ಮೊದಲು ಬಾರಿಗೆ ಬೀದರ್ ಕೃಷಿ ಸಂಶೋಧನ ಕೇಂದ್ರದ ವಿಜ್ಞಾನಿ ಡಾ. ಆರ್.ಎಲ್. ಜಾಧವ ಅವರ ಮಾರ್ಗದರ್ಶನದಲ್ಲಿ ಬೇಸಿಗೆಯ ಎಳ್ಳು ಬೆಳೆಯ ಬಿತ್ತನೆ ಕೈಗೊಂಡಿದ್ದಾರೆ. ಈ ಬೆಳೆ ಹೆಚ್ಚಾಗಿ ಮಳೆಗಾಲದ ಮುಂಗಾರು ಹಂಗಾಮಿನ ಅಲ್ಪಾವಧಿಯ ಬೆಳೆಯನ್ನಾಗಿಯೇ ಈ ಭಾಗದ ರೈತರು ಬೆಳೆಯುವುದು ಸಾಮಾನ್ಯವಾಗಿದೆ.
ಆದರೆ ರೈತ ಅಣ್ಣಯ್ಯ ಸ್ವಾಮಿ ಅವರು ಪ್ರಮಾಣಿಕೃತ ಎಳ್ಳಿನ ಬೀಜದ ಬಿತ್ತನೆ ಬೇಸಿಗೆಯಲ್ಲಿ ಕೈಗೊಂಡಿದ್ದು, ಎರಡುವರೆ ತಿಂಗಳಾಗಿದ್ದು, ಎರಡು ದಿನಗಳ ಹಿಂದೆ ಫಸಲು ಕಟಾವು ಮಾಡಿ ಒಣಗಲಟ್ಟಿದ್ದು, ಎರಡ್ಮೂರು ದಿನಗಳಲ್ಲಿ ರಾಶಿ ಮಾಡಲಾಗುವುದು ಎಂದು ರೈತ ಅಣ್ಣಯ್ಯಾ ಸ್ವಾಮಿ ಹೇಳಿಕೊಂಡಿದ್ದಾರೆ.
ಹೊಲದಲ್ಲಿ ಬೆಳೆ ಮಾತ್ರ ಬಂಪರ ಬೆಳೆದು ನೋಡಗರನ್ನು ಕೈ ಮಾಡಿ ಕರೆದಿದೆÉ. ಮೂರರಿಂದ ನಾಲ್ಕು ಅಡಿಯ ಎತ್ತರಕ್ಕೆ ಬೆಳೆದ ಬೆಳೆಯು ಮೈತುಂಬ ಕಾಯಿ ಕಟ್ಟಿದ್ದು ಹೆಚ್ಚಿನ ಫಸಲು ದೊರೆಯುವ ನಿರೀಕ್ಷೆಯಿದೆ ಎಂದು ಹೇಳುವ ರೈತ ಅಣ್ಣಯ್ಯಾ ಸ್ವಾಮಿ ಅವರು ಇನ್ನೂಳಿದ ರೈತರನ್ನು ತಮ್ಮತ್ತ ನೋಡುವಂತೆ ಮಾಡಿದ್ದಾರೆ.
ಬೇಸಿಗೆಯಲ್ಲಿ ಬೆಳೆದ ಈ ಬೆಳೆ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ತರವು ವಿಶ್ವಾಸ ಮೂಡಿದೆ. ಕೇವಲ ಮೂರು ತಿಂಗಳ ಬೆಳೆಯಾದ ಎಳ್ಳು ಬಿತ್ತನೆಯ ವೇಳೆ ರಸಾಯನಿಕ ಗೊಬ್ಬರ ಬಳಸದೆ, 3 ಕೆ.ಜಿ. ಎಳ್ಳು ಬೀಜದ ಬಿತ್ತನೆ ಹಾಗೂ ಬೆಳೆಯ ಸದೃಢಕ್ಕೆ 6 ಕೆ.ಜಿ. ಸಿಪ್ಕಿ ಮ್ಯಾಜಿಕ್ ಸಿಂಪರಣೆ ಕೈಗೊಂಡಿದ್ದು ಬಿಟ್ಟರೆ ಇನ್ಯಾವುದೇ ಖರ್ಚು ಮಾಡಿಲ್ಲ. ಆರು ಬಾರಿ ನೀರು ಮಾತ್ರ ಹಾಯಿಸಿದ್ದಾರೆ.
ಬೀದರನಿಂದ ಪ್ರಯೋಗ ಶುರು: ಕಳೆದ 10 ವರ್ಷಗಳ ಹಿಂದೆ ಬೀದರ್ ಕೃಷಿ ಸಂಶೋಧನ ಕೇಂದ್ರದ ಬೇಸಾಯ ವಿಜ್ಞಾನಿ ಡಾ. ಆರ್.ಎಲ್. ಜಾಧವ ಅವರು, ಬೀದರ್ ಜಿಲ್ಲೆಯಲ್ಲಿ ಆರಂಭಿಸಿದ ಬೇಸಿಗೆ ಎಳ್ಳು ಬೆಳೆಯ ಪ್ರಯೋಗವನ್ನು ಬೀದರ್ ಜಿಲ್ಲೆಯಿಂದ ಆರಂಭಗೊಂಡು ಈಗ ಇಡೀ ರಾಜ್ಯದಾದ್ಯಂತ ಹಾಸನ ಮತ್ತು ಉಡುಪಿ ಜಿಲ್ಲೆಗೂ ವಿಸ್ತರಣೆಗೊಂಡಿದೆ. ಬೇಸಿಗೆಯಲ್ಲಿ ಇನ್ನೂಳಿದ ಬೆಳೆಗಿಂತ ಎಳ್ಳು ಬೀಜದ ಶ್ವೇತಾ ತಳಿಯ ಬೆಳೆಯ ರೈತ ಸಮುದಾಯಕ್ಕೆ ಲಾಭ ದಾರಿಮಾಡಿಕೊಟ್ಟಿದೆ.
6 ಸಾವಿರ ಎಕರೆ ವಿಸ್ತರಣೆ:
ಬೀದರ್, ಕಲಬುರಗಿ ಜಿಲ್ಲೆ ಸೇರಿ ರಾಜ್ಯದಲ್ಲಿ ಪ್ರಸಕ್ತ ಬೇಸಿಗೆಯಲ್ಲಿ ರೈತರು 5ರಿಂದ 6 ಸಾವಿರ ಎಕರೆ ಬೇಸಿಗೆ ಎಳ್ಳು ಬಿತ್ತನೆ ಕೈಗೊಂಡಿದ್ದಾರೆ. ಕಳೆದ 10 ವರ್ಷಗಳಿಂದ ಆರಂಭಿಸಿದ ಶ್ರಮದ ಫಲದಿಂದ ಬೇಸಿಗೆಯ ಬಿತ್ತನೆ ಕ್ಷೇತ್ರ ವ್ಯಾಪ್ತಿ ಹೆಚ್ಚಾಗಿದ್ದು ಇದರಿಂದ ರೈತರಿಗೆ ಲಾಭವು ತಂದುಕೊಡುತ್ತಿದೆ ಎಂದು ವಿಜ್ಞಾನಿ ಡಾ. ಆರ್.ಎಲ್ ಜಾಧವ ಅವರು ಮಾಹಿತಿ ನೀಡಿದ್ದಾರೆ.
ಬೇಸಿಗೆಯಲ್ಲಿ ಹೆಚ್ಚಿನ ಬೆಳೆಯ ಉತ್ಪಾದನೆ ಕೊರತೆ ಕಾಣುತ್ತಿದ್ದೇವೆ. ಎಲ್ಲವನ್ನು ಗಮನಿಸಿದಾಗ ರೈತರಿಗೆ ಬೇಸಿಗೆ ಎಳ್ಳು ಬೆಳೆ ವರದಾನವಾಗಿದೆ. ಇದಕ್ಕೆ ಖರ್ಚು ಕಡಿಮೆ, ಎಕರೆ 1 ಕೆ.ಜಿ. ಬೀಜ ಸಾಕಾಗುತ್ತದೆ. ಜನವರಿ 15ರಿಂದ ಫೆ. ಕೊನೆಯ ವಾರದಲ್ಲಿ ಬಿತ್ತನೆ ಕೈಗೊಳ್ಳಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಬೇಸಿಗೆಯಲ್ಲಿ ಶ್ವೇತ ತಳ್ಳಿಯೇ ಆಯ್ಕೆ:
ಶ್ವೇತಾ ತಳಿಯ ಎಳ್ಳಿನ ಬೀಜವನ್ನೇ ಬೇಸಿಗೆಯಲ್ಲಿ ಬಿತ್ತನೆ ಕೈಗೊಳ್ಳಬೇಕು. ಇದು ಮೂರು ತಿಂಗಳ ಬೆಳೆಯಾಗಿದೆ. ಎಕರೆ 4ರಿಂದ 5 ಕ್ವಿಂಟಲ್ ಉತ್ಪಾದಿಸಬಹುದಾಗಿದೆ. ಸದ್ಯ ಮಾರುಕಟ್ಟಯ ಬೆಲೆ ಅಂದಾಜಿಸಿದಂತೆ 15ರಿಂದ 17 ಸಾವಿರ ರೂಪಾಯಿವರೆಗೆ ಕ್ವಿಂಟಲವೊಂದಕ್ಕೆ ಮಾರಾಟವಾಗುತ್ತಿದೆ. ಎಕರೆಗೆ 7ರಿಂದ 10 ಸಾವಿರ ಮಾತ್ರ ಖರ್ಚು 40 ಸಾವಿರ ರೂಪಾಯಿ ಎಕರೆಗೆ ಮೂರು ತಿಂಗಳಲ್ಲೇ ಲಾಭ ತಂದುಕೊತ್ತದೆ. ರೈತರು ಬೇಸಿಗೆಯಲ್ಲಿ ಈ ಬೆಳೆ ಅನುಸರಿಸುವ ಮೂಲಕ ಆರ್ಥಿಕತೆ ಹೆಚ್ಚಿಸಿಕೊಳ್ಳಬೇಕು ಎಂದು ವಿಜ್ಞಾನಿ ಡಾ. ಆರ್.ಎಲ್. ಜಾಧವ ಅವರು ಆಸಕ್ತ ರೈತರಿಗೆ ಸಲಹೆ ನೀಡಿದ್ದಾರೆ.