ಸರ್ಕಾರಿ ಶಾಲೆಗಳ ಫಲಿತಾಂಶ ಕುಸಿತ!
ಕೊಟ್ರೇಶ್ ಉತ್ತಂಗಿ
ಕೊಟ್ಟೂರು, ಮೇ.13: 2023-24 ರ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು ಹಿಂದಿನ ವರ್ಷದ ಫಲಿತಾಂಶಕ್ಕಿಂತ ಈ ವರ್ಷ ಸರ್ಕಾರಿ ಶಾಲೆಗಳ ಫಲಿತಾಂಶ ಬಾರಿ ಕುಸಿತ ಕಂಡಿದೆ.
ಹೌದು, ತಾಲೂಕಿನ ಸರ್ಕಾರಿ ಬಾಲಕರ ಪ್ರೌಢಶಾಲೆ ಕೊಟ್ಟೂರು ಶಾಲೆಯ ಹಿಂದಿನ ವರ್ಷದ ಫಲಿತಾಂಶ ಶೇ 83 ರಷ್ಟು ಆಗಿತ್ತು. ಈ ವರ್ಷ ಫಲಿತಾಂಶವು ಶೇ 45 ಕ್ಕೆ ಕುಸಿತ ಕಂಡಿದೆ. ಈ ಶಾಲೆಯಲ್ಲಿ ಈ ಬಾರಿ 93 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 41 ವಿದ್ಯಾರ್ಥಿಗಳು ಮಾತ್ರ ಪಾಸ್ ಆಗಿದ್ದು, ಇನ್ನುಳಿದ  ವಿದ್ಯಾರ್ಥಿಗಳು ಅನುತ್ತಿರ್ಣ ಆಗಿದ್ದರಿಂದ ಫಲಿತಾಂಶ ಪಾತಾಳಕ್ಕೆ ಕುಸಿತ‌ ಕಂಡಿದೆ.
ಕೊಟ್ಟೂರಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಹಿಂದಿನ ವರ್ಷ ಶೇ 88 ರಷ್ಟು ಫಲಿತಾಂಶ ಆಗಿತ್ತು ಈ ವರ್ಷ 63.36 ಕ್ಕೆ ಇಳಿಕೆ ಕಂಡಿದೆ. ಶಾಲೆಯ ಒಟ್ಟು 101 ವಿದ್ಯಾರ್ಥಿಗಳಲ್ಲಿ 64 ವಿದ್ಯಾರ್ಥಿಗಳು ಮಾತ್ರ  ಉತ್ತೀರ್ಣರಾಗಿದ್ದಾರೆ.
ಹ್ಯಾಳ್ಯಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿಂದಿನ ವರ್ಷ 81 ರಷ್ಟು ಫಲಿತಾಂಶ ಪ್ರಕಟಗೊಂಡಿದ್ದು ಈ ವರ್ಷ  ಶೇ 55 ಕ್ಕೆ ಕುಸಿತ ಕಂಡಿದೆ.
ಒಟ್ಟು 40 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 22 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ.
ಅನುತ್ತಿರ್ಣವಾದ 18 ವಿದ್ಯಾರ್ಥಿಗಳ ಪೈಕಿ ಸುಮಾರು 10 ಕ್ಕೂ ವಿದ್ಯಾರ್ಥಿಗಳು 6 ವಿಷಯಗಳಲ್ಲಿ ಅನುತ್ತಿರ್ಣರಾಗಿದ್ದಾರೆ. ಹಿಂದಿನ ವರ್ಷದ ಫಲಿತಾಂಶಕ್ಕೂ ಈ ವರ್ಷ ಫಲಿತಾಂಶಕ್ಕೂ ಹೋಲಿಕೆ ಮಾಡಿದರೆ ಸರ್ಕಾರಿ ಶಾಲೆಯ ಎಸ್ ಎಲ್ ಸಿ ಫಲಿತಾಂಶದಲ್ಲಿ ಭಾರಿ ಕುಸಿತ ಕಂಡಿದೆ.
ಹ್ಯಾಳ್ಯಾ ಶಾಲೆಯಲ್ಲಿ 18 ವಿದ್ಯಾರ್ಥಿಗಳು ಅನುತ್ತೀರ್ಣವಾಗಿದ್ದು ಅತಿ ಹೆಚ್ಚು ವಿದ್ಯಾರ್ಥಿಗಳು 6 ವಿಷಯಗಳಲ್ಲಿ ಅನುತ್ತೀರ್ಣರಾಗಿ ಈ  ವಿಷಯಗಳಲ್ಲಿ 20 ಅಂಕದೊಳಗಡೆ ತೆಗೆದುಕೊಂಡ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು  ಪೋಷಕರಲ್ಲಿ ಗೊಂದಲಮಯ ಉಂಟಾಗಿದೆ.
ನನ್ನ ಮಗಳು ಶಾಲೆಯಲ್ಲಿ ಎಲ್ಲಾ ವಿಷಯದಲ್ಲೂ 20 ಕ್ಕೆ 17 ಅಂಕವನ್ನು ತೆಗೆದುಕೊಳ್ಳುತ್ತಿದ್ದೆ ಎಂದು ಹೇಳುತ್ತಿದ್ದಳು. ಆದರೆ ಈ ಫಲಿತಾಂಶದಲ್ಲಿ ಎಲ್ಲಾ ವಿಷಯದಲ್ಲಿ ಫೇಲಾಗಿರುವುದು ನಮಗೆ ನಂಬಲಾರ್ಹದಂತಹ ವಿಷಯ ಎಂದು ತಮ್ಮ  ಪೋಷಕರು ಅಳಲನ್ನು ತೋಡಿಕೊಂಡರು.
ವಿದ್ಯಾರ್ಥಿಗಳ ಜೊತೆಗೆ ಪೋಷಕರು ತಮ್ಮ ಮನೆಯಲ್ಲಿ ತಮ್ಮ ಮಕ್ಕಳನ್ನು ಓದಿಸಿದರೆ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಗುತ್ತದೆ. ಶಾಲೆಯಲ್ಲಿ ಮುಖ್ಯೋಪಾಧ್ಯಾಯರ ಇಲ್ಲದಂತಾಗಿದೆ. ಮುಖ್ಯೋಪಾಧ್ಯಾಯರ ಹುದ್ದೆಯನ್ನು ತುಂಬಿದರೆ   ನಮಗೆ ಹೆಚ್ಚಿನ ಪ್ರೋತ್ಸಾಹದಿಂದ ವಿದ್ಯಾರ್ಥಿಗಳ ಅಂಕ ಗಳಿಸಲು ಸಾಧ್ಯವಾಗುತ್ತದೆ.
ನಾಗರಾಜ್ ನಾಯ್ಕ್
ಪ್ರಭಾರಿ ಮುಖ್ಯೋಪಾಧ್ಯಾಯರು
ಸರ್ಕಾರಿ ಪ್ರೌಢ ಶಾಲೆ ಹ್ಯಾಳ್ಯಾ
ಸರ್ಕಾರಿ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು  ಪಠ್ಯ  ವಿಷಯಗಳಲ್ಲಿ 3 -4 ಅಂಕ ಗಳಿಸಿರುವುದು ನೋವಿನ ಸಂಗತಿ, ಯಾವ ಶಾಲೆಯಲ್ಲಿ ವಿದ್ಯಾರ್ಥಿಗಳು ಕಡಿಮೆ ಅಂಕ ಗಳಿಸಿದ್ದಾರೋ ಅಂತಹ ಶಾಲೆಗಳಿಗೆ ಭೇಟಿ ನೀಡಿ   ಶಿಕ್ಷಕರ ಬೋಧನೆಯ ಮಟ್ಟದ ಬಗ್ಗೆ ಕಲೆ ಹಾಕಿ,
ಶಿಕ್ಷಕರ ಬೋಧನೆಯಲ್ಲಿ ಕೊರತೆ ಉಂಟಾದಲ್ಲಿ ಅಂತಹ ಶಿಕ್ಷಕರ ವಿರುದ್ಧ  ಕ್ರಮ ಕೈಗೊಂಡು, ಮುಂದಿನ ಫಲಿತಾಂಶದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ಗಳಿಸುವಂತೆ ಮಾಡಬೇಕು ಎಂದು ಶಿಕ್ಷಕರಿಗೆ ಸೂಚಿಸುತ್ತೇನೆ.
 ಪದ್ಮನಾಭ ಕರ್ಣಂ
 ಕ್ಷೇತ್ರ ಶಿಕ್ಷಣಾಧಿಕಾರಿ ಕೂಡ್ಲಿಗಿ