ವಿಪರೀತ ಗಾಳಿಮಳೆ : ಹಾರಿ ಹೋದ ಮನೆಮೇಲಿನ ಶೀಟ್ಗಳು, ನೆಲಕ್ಕುರುಳಿದ ಎಳೆಬಳ್ಳಿಗಳು.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.13 :- ನಿನ್ನೆ ರಾತ್ರಿಯಿಂದ ಇಂದು ನಸುಕಿನವರೆಗೆ ವಿಪರೀತ ಮಳೆಗಾಳಿಯಿಂದ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಎರಡು ಮನೆಗಳ ಮೇಲ್ಚವಾಣಿ ಶೀಟ್ ಗಳು ಹಾರಿಹೋಗಿದ್ದು ತೋಟದಲ್ಲಿರುವ ಎಲೆ ಬಳ್ಳಿಗಳು ನೆಲಕ್ಕುರುಳಿ ಅಪಾರ ಪ್ರಮಾಣದ ನಷ್ಟವಾಗಿದೆ ಮತ್ತು ಯಾವುದೇ ಪ್ರಾಣಪಾಯದ ಅನಾಹುತವಾಗಿರುವುದಿಲ್ಲ ಎನ್ನುವ ಮಾಹಿತಿ ತಿಳಿದಿದೆ.
ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿಯ ಗುಡೇಕೋಟೆ ಭಾಗದಲ್ಲಿ 27.3ಮಿ ಮೀ ನಷ್ಟು ಹಾಗೂ ಚಿಕ್ಕಜೋಗಿಹಳ್ಳಿ ಭಾಗದಲ್ಲಿ 18.2ರಷ್ಟು ಮಳೆಯಾಗಿದ್ದು ಹೋಬಳಿಯ ಸಂಕಲಾಪುರ ಗ್ರಾಮದ ಗುಂಡಮ್ಮ ಹಾಗೂ ಯರ್ರಲಿಂಗನಹಳ್ಳಿ ಗ್ರಾಮದ ಹನುಮಂತಪ್ಪ ಇವರ ಮನೆಗಳ ಮೇಲ್ಚವಾಣಿ ಹೊದಿಕೆಯ ಶೀಟ್ ಗಳು ಹಾರಿಹೋಗಿದ್ದು ಮಳೆ ಸುರಿದ ಪರಿಣಾಮ ದವಸ ಧಾನ್ಯಗಳು ನೀರಿನಲ್ಲಿ ಕೊಚ್ಚಿಹೋಗಿವೆ ಅಲ್ಲದೆ ಹುರುಳಿಹಾಳ್ ಗ್ರಾಮದ ಹೊರವಲಯದ ತೋಟಗಳಲ್ಲಿ ಏಕಾಶಿ ಏಕಾಂತಪ್ಪ, ಮಲ್ಲಮ್ಮ ಹಾಗೂ ಸಣ್ಣ ಓಬಯ್ಯ ಇವರುಗಳ ತೋಟದಲ್ಲಿನ ಅಪಾರ ಬೆಲೆಯ ಎಲೆಬಳ್ಳಿಗಳು ನೆಲಕ್ಕೂರುಳಿ ಅಪಾರ ಪ್ರಮಾಣದ ನಷ್ಟವಾಗಿವೆ ಎಂದು ತಿಳಿದಿದೆ
ಕೂಡ್ಲಿಗಿ ಹೋಬಳಿಯ ಕೂಡ್ಲಿಗಿ ಭಾಗದಲ್ಲಿ 22.4 ಮಿ ಮೀ ನಷ್ಟು ಮಳೆಯಾಗಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ ಮತ್ತು ಹೊಸಹಳ್ಳಿ ಹೋಬಳಿಯಲ್ಲಿ ಹೆಚ್ಚಿನ ಪ್ರಮಾಣ ಅಂದರೆ 54.2ಮಿ ಮೀ ನಷ್ಟು ಹಾಗೂ ಬಣವಿಕಲ್ಲು ಭಾಗದಲ್ಲಿ 12.3ಮಿ ಮೀ ನಷ್ಟು ಮಳೆ ಸುರಿದಿದ್ದು ಯಾವುದೇ ಪ್ರಕೃತಿ ವಿಕೋಪ ಸಂಭವಿಸಿಲ್ಲ ಮತ್ತು ಕೂಡ್ಲಿಗಿ ತಾಲೂಕಿನಲ್ಲಿ ಯಾವುದೇ ಜೀವಹಾನಿಯಾಗಿರುವ ವರದಿಯಾಗಿಲ್ಲ ಎಂದು ಕಂದಾಯ ಇಲಾಖೆ ಮೂಲಗಳಿಂದ ತಿಳಿದಿದೆ. ಘಟನಾ ಸ್ಥಳಕ್ಕೆ ಸಂಭಂದಿಸಿದ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ನಷ್ಟದ ಪ್ರಮಾಣ ನೀಡಿ ರೈತರ ಪರಿಹಾರ ಮೊತ್ತ ಸರ್ಕಾರದಿಂದ ಕೊಡುವ ಯತ್ನಕ್ಕೆ ಮುಂದಾಗಿದ್ದಾರೆ ಎಂದು ತಿಳಿದಿದೆ.