ವಿಶ್ವ ತಾಯಂದಿರ ದಿನಜಗತ್ತಿನಲ್ಲಿ ತಾಯಿ ದೇವರ ಸ್ವರೂಪ:ಭುವನೇಶ್ವರಿ
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.13: ಭಾರತದಲ್ಲಿ ತಾಯಂದಿರ ದಿನವು ಸಾಂಸ್ಕøತಿಕ ಮಹತ್ವವನ್ನು ಹೊಂದಿದ್ದು, ಸಾಂಪ್ರದಾಯಿಕ ಮೌಲ್ಯಗಳಲ್ಲಿ ಆಳವಾಗಿ ಬೇರೂರಿದೆ. ತಾಯಂದಿರು ತಮ್ಮ ಕುಟುಂಬಕ್ಕಾಗಿ ಮಾಡುವ ನಿಸ್ವಾರ್ಥ ತ್ಯಾಗವನ್ನು ಗುರುತಿಸಿ, ಗೌರವಿಸುವ ದಿನ ಇದಾಗಿದೆ ಎಂದು ಭುವನೇಶ್ವರಿ ಬಂಡೆ ಹೇಳಿದರು.
ತಾಲೂಕಿನ ನಾಗಠಾಣ ಗ್ರಾಮದಲ್ಲಿ ರವಿವಾರ ಸಂಜೆ ಹಮ್ಮಿಕೊಂಡ ವಿಶ್ವ ತಾಯಂದಿರ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ತಾಯಿಯಿಲ್ಲದೆ ಜೀವನವೇ ಶೂನ್ಯ. ತಾಯಂದಿರು ಇಲ್ಲದಿದ್ದರೆ ನಾವೂ ಇರುತ್ತಿರಲಿಲ್ಲ. ಸಂತೋಷ ಚಿಕ್ಕದಿರಲಿ, ದೊಡ್ಡದಿರಲಿ ತಾಯಿ ಅದರಲ್ಲಿ ಪಾಲ್ಗೊಳ್ಳುತ್ತಾಳೆ ಏಕೆಂದರೆ ನಮ್ಮ ಸಂತೋಷವು ತಾಯಿಗೆ ಹೆಚ್ಚು ಮುಖ್ಯವಾಗಿದೆ ಎಂದರು.
ಗೃಹಿಣಿ ಸುರೇಖಾ ಮಾತನಾಡಿ, ತಾಯಿಯು ಜಗತ್ತಿನಲ್ಲಿ ದೇವರ ಮತ್ತೊಂದು ರೂಪ, ತನ್ನ ಮಕ್ಕಳ ದುಃಖವನ್ನು ಸಹಿಸಿ ಅವರಿಗೆ ಪ್ರೀತಿ ಮತ್ತು ರಕ್ಷಣೆಯನ್ನು ನೀಡುವ ತಾಯಿ ಈ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ವ್ಯಕ್ತಿ. ತಾಯಿಯ ಬೆಲೆಯನ್ನು ಇಂದಿನ ಪೀಳಿಗೆಗೆ ನಾವು ತಿಳಿಹೇಳಬೇಕಾಗಿದೆ ಎಂದು ಹೇಳಿದರು.
ಸುನೀತಾ ಗಿರಿಸಾಗರ ಮಾತನಾಡಿ, ಸಮಾಜ ಮತ್ತು ಕುಟುಂಬದಲ್ಲಿ ತಾಯಿಯ ಪಾತ್ರ ಬಹಳ ಮುಖ್ಯ. ಮಗುವಿಗೆ ಮಾತನಾಡಲು, ನಡೆಯಲು ಕಲಿಸುವ ತಾಯಿಯೇ ಮೊದಲ ಗುರು. ತಾಯಿಯು ಮಗುವಿಗೆ ಶಿಸ್ತು, ಉತ್ತಮ ನಡವಳಿಕೆ ಮತ್ತು ದೇಶ, ಸಮಾಜ, ಕುಟುಂಬದ ಜವಾಬ್ದಾರಿಯ ತಿಳಿವಳಿಕೆಯನ್ನು ನೀಡುತ್ತಾಳೆ ಎಂದು ಹೇಳಿದರು.
ಶಿಕ್ಷಕಿ ಪ್ರಿಯಾಂಕ ಗಡೇದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಗತ್ತಿನಲ್ಲಿ ಅಮ್ಮನ ಪ್ರೀತಿ, ತ್ಯಾಗ, ವಾತ್ಸಲ್ಯಕ್ಕೆ ಸರಿಸಾಟಿ ಇಲ್ಲ. ಅವಳ ನಿಷ್ಕಲ್ಮಶ ಪ್ರೀತಿಗೆ ನಾವು
ಚಿರಋಣಿ.ತಾಯಿಯ ಪ್ರೀತಿಯು ತಾಯಿ ಮತ್ತು ಮಗುವಿನ ನಡುವಿನ ಅನನ್ಯ ಮತ್ತು ಮುರಿಯಲಾಗದ ಬಂಧವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಕ್ಕಳಾದ ಅನುಶ್ರೀ-ಶ್ರೀನಿಧಿ ಬಂಡೆ ಅವರು ತಮ್ಮ ತಾಯಿಗೆ ಬಸವಣ್ಣನವರ ಭಾವಚಿತ್ರವನ್ನು ಕೊಡುಗೆಯಾಗಿ ನೀಡಿದರು.
ತಾಯಂದಿರರಾದ ಸುನಂದಾ ಬಂಡೆ, ಸುಜಾತಾ ಗಿರಿಸಾಗರ, ಅನುಸೂಯಾ ಸಮಗೊಂಡ,ಮಹಾದೇವಿ ಗಿರಿಸಾಗರ ಹಾಗೂ ಮಕ್ಕಳಾದ ಹರ್ಷ, ಗ್ರಂಥ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.