ಶಿಕ್ಷಣ ಮತ್ತು ಆರೋಗ್ಯ ಸೇವೆ ಮನುಕುಲಕ್ಕೆ ಪ್ರಮುಖ- ಡಾ.ಎಚ್.ಎಲ್.ಪುಷ್ಪ
ಸಂಜೆವಾಣಿ ವಾರ್ತೆ
ಮಂಡ್ಯ: ಮಂಡ್ಯ ಇಂದಿನ ಸಾಮಾಜಿಕ ಸನ್ನಿವೇಶದಲ್ಲಿ ಸೇವೆಯ ವಿಷಯಕ್ಕೆ ಬಂದಾಗ ಶಿಕ್ಷಣ ಮತ್ತು ಆರೋಗ್ಯ ಸೇವೆ ಮನುಕುಲಕ್ಕೆ ಪ್ರಮುಖವಾದದ್ದು ಎಂದು ಅಖಿಲ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್.ಪುಷ್ಪ ತಿಳಿಸಿದರು.
ನಗರದ ಕರ್ನಾಟಕ ಸಂಘದ ಆವರಣದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪಡೆದ ಡಾ.ಮೀರಾ ಶಿವಲಿಂಗಯ್ಯ ಅವರ ಅಭಿನಂದನಾ ಸಮಾರಂಭದಲ್ಲಿ ಮೀರಾ ಅವರನ್ನು ಅಭಿನಂದಿಸಿ ಮಾತನಾಡಿದರು
ಶಿಕ್ಷಣ ವ್ಯವಸ್ಥೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಶಿಕ್ಷಣ, ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಅಂತರ ಉಂಟು ಮಾಡಿವೆ. ಇವುಗಳ ನಡುವೆ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸಮನಾಗಿ ಓದಬಲ್ಲರು ಅವಕಾಶವನ್ನು ಪಡೆಯಬಲ್ಲರು ಎಂಬುದು ಪ್ರಶಂಸನೀಯ ಎಂದರು.
ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಗುರು-ಶಿಷ್ಯರ ಸಂಬಂಧ, ಅಧಿಕಾರಿಗಳು ಉಪನ್ಯಾಸಕರ ಸಂಬಂಧ ಹದಗೆಡುತ್ತಿರುವ ಸಂದರ್ಭದಲ್ಲಿ ಮೀರಾ ಶಿವಲಿಂಗಯ್ಯ ಶಿಕ್ಷಣ ತಜ್ಞೆಯಾಗಿ ನಾನಾ ರೀತಿಯ ಶಿಕ್ಷಣ ಸಂಸ್ಥೆಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಪುರುಷರು ಸವಾಲುಗಳನ್ನು ಸ್ವೀಕರಿಸುವಷ್ಟು ಸ್ತ್ರೀಯರು ಸ್ವೀಕರಿಸಲು ಕಷ್ಟದ ಸಂದರ್ಭದಲ್ಲಿ ಇವರ ಕಾರ್ಯತತ್ಪರತೆ ಅರಿವಾಗುತ್ತದೆ ಎಂದು ತಿಳಿಸಿದರು.
ಹೊಸ ಶಿಕ್ಷಣ ರೀತಿಯಲ್ಲಿ ನಾನಾ ರೀತಿಯ ಗೊಂದಲಗಳಿದ್ದು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತಿದೆ. ಸೇವೆ ಮತ್ತು ಉದ್ಯಮ ಬೇರೆ ಬೇರೆಯಾಗಿದ್ದರೂ ಶಿಕ್ಷಣ ಉದ್ಯಮವಾಗಿರುವ ಸಂದರ್ಭದಲ್ಲಿ ಯಾವುದೇ ನಿರೀಕ್ಷೆಯಿಲ್ಲದೆ ಬಡ ವಿದ್ಯಾರ್ಥಿಗಳಿಗೆ ನೆರವಾಗಿ ಶಿಕ್ಷಣ ನೀಡುವುದು ಸವಾಲಿನ ಕೆಲಸ. ಅದನ್ನು ಮಹಿಳೆಯಾಗಿ ನಿಭಾಯಿಸಿರುವುದು ಪ್ರಶಂಸನೀಯ. ಇವರ ಕೆಲಸದಲ್ಲಿ ಪತಿ ಶಿವಲಿಂಗಯ್ಯ ಅವರು ಪರಸ್ಪರ ಕಾಯಕದಲ್ಲಿ ಎಡಬಿಡದೆ ಹಿಂಬಾಲಿಸಿ ಸಹಕಾರ ನೀಡುತ್ತಿರುವ ರೀತಿ ಇವರ ಸಾಧನೆಗೆ ಅವರ ದಾಂಪತ್ಯ ಯಶಸ್ಸಿಗೆ ಕಾರಣವಾಗಿದೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮೀರಾ ಶಿವಲಿಂಗಯ್ಯ ತನ್ನ ಎಲ್ಲಾ ಸಾಧನೆಗೆ ಕಂಪ್ಯೂಟರ್ ಶಿಕ್ಷಣ ತಳಹದಿಯಾಯಿತು. ತಾವು ನಡೆದು ಬಂದ ಜೀವನ ದಾರಿ ಒಳ್ಳೆಯ ಅನುಭವ ನೀಡಿದೆ. ಚಿಕ್ಕಂದಿನಿಂದಲೂ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ಭಾವನೆ ಬಂದಿತ್ತು. ಅದರಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿದ್ದೇನೆ ಎಂದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪಡೆದಿರುವ ಎಸ್.ಬಿ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.
ಮಾಜಿ ಸಚಿವ ಶಾಸಕ ಹೆಚ್.ವಿಶ್ವನಾಥ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಪ್ರಾಂಶುಪಾಲ ಡಾ.ಮ.ರಾಮಕೃಷ್ಣ ಅಭಿನಂದನಾ ನುಡಿಗಳನ್ನಾಡಿದರು.
ಸಮಾರಂಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶಗೌಡ, ಎಸ್. ಬಿ. ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ಕಾರ್ಯದರ್ಶಿ ಹೆಚ್.ಡಿ.ಸೋಮಶೇಖರ್,ಲೋಕೇಶ್ ಚಂದಗಾಲು, ವಿಜಯಲಕ್ಷ್ಮಿ ರಘುನಂದನ್,ಉಪನ್ಯಾಸಕಿ ಅನಿತಾ,ಹನಕೆರೆ ನಾಗಪ್ಪ,ಡಾ.ಕೆಂಪಮ್ಮ,ಕೋಣನಹಳ್ಳಿ ಜಯರಾಮು, ಹಾಜರಿದ್ದರು.