ಸ್ವೀಪ್ ಸಮಿತಿ ಕಾರ್ಯ ಕೂಡ್ಲಿಗಿ ತಾಲೂಕು ಫಸ್ಟ್
ಕೂಡ್ಲಿಗಿ. ಮೇ.12 :- ಕಳೆದ 2019ರಲ್ಲಿ ನಡೆದ ಲೋಕಸಭೆ ಚುನಾವಣೆ ಮತದಾನಕ್ಕಿಂತ ಈ ಬಾರಿ ತಾಲೂಕಿನಲ್ಲಿ ಶೇ.7.66ರಷ್ಟು ಮತದಾನ ಪ್ರಮಾಣ ಹೆಚ್ಚಾಗಿದ್ದು, ವಿಜಯನಗರ ಜಿಲ್ಲೆಗೆ  ಪ್ರಥಮ  ಸ್ಥಾನದಲ್ಲಿದೆ ಎಂದು ಕೂಡ್ಲಿಗಿ ತಾಲೂಕು  ತಾಪಂ ಇಒ ಹಾಗೂ ಸ್ವೀಪ್ ಸಮಿತಿ ತಾಲೂಕು ಅಧ್ಯಕ್ಷ  ವೈ.ರವಿಕುಮಾರ ತಿಳಿಸಿದರು.
 ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ  ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಜಿಲ್ಲಾ ಸ್ವೀಪ್ ಸಮಿತಿ ಮಾರ್ಗದರ್ಶನದಲ್ಲಿ ಮನೆ ಮನೆಗೆ ಕರಪತ್ರ ಹಂಚುವುದು, ಬೈಕ್ ರ್ಯಾಲಿ, ಪಂಜಿನ ಮೆರವಣಿಗೆ, ರಂಗೋಲಿ ಸ್ಪರ್ಧೆ,ನರೇಗಾ ಕಾಮಗಾರಿ ಸ್ಥಳ ಸೇರಿ ಗ್ರಾಪಂಗಳಿಂದಲೂ ಹೆಚ್ಚಿನ ಮತದಾನ ಜಾಗೃತಿ ಮೂಡಿಸಲಾಗಿತ್ತು. ಈ ಬಾರಿ ಶೇ.80ಕ್ಕೂ ಹೆಚ್ಚಿನ ಮತದಾನವಾಗುವ ನಿಟ್ಟಿನಲ್ಲಿ ಪ್ರಚಾರ ನಡೆಸಿದ್ದು, ಶೇ. 76.58ರಷ್ಟು ಮತದಾನವಾಗಿದೆ ಎಂದರು. 118 ಮತಗಟ್ಟೆಗಳಲ್ಲಿ ಶಾಮಿಯಾನ ಹಾಕಿಸಿ ನೆರಳಿನ ವ್ಯವಸ್ಥೆ ಕುಡಿವ ನೀರು, ಶೌಚಾಲಯ, ವಿಶೇಷ ಚೇತನರಿಗೆ ವೀಲ್ ಚೇರ್ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದರಲ್ಲದೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮೀಣ ಭಾಗದ 74 ಮತ್ತು ಪಟ್ಟಣ ವ್ಯಾಪ್ತಿಯ 12 ಮತಗಟ್ಟೆಗಳಲ್ಲಿ ಶೇ.60ಕ್ಕಿಂತ ಕಡಿಮೆ ಮತದಾನವಾಗಿತ್ತು. ಆದರೆ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಜೋಗಿಹಳ್ಳಿ ತಾಂಡಾ ಮತ್ತು ಪಟ್ಟಣದ ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಮತಗಟ್ಟೆಯಲ್ಲಿ ಮಾತ್ರ ಶೇ.60ಕ್ಕಿಂತ ಕಡಿಮೆ ಮತದಾನ ವಾಗಿದೆ ಎಂದರು. ನರೇಗಾ ಯೋಜನೆ ಸಹಾಯಕ ನಿರ್ದೇಶಕ ಕೆ.ಆರ್.ಪ್ರಕಾಶನಾಯ್ಕ್ , ತಾಪಂ ವ್ಯವಸ್ಥಾಪಕ ವೈ.ಎಸ್. ಅಶ್ವಥಕುಮಾರ, ಮಲ್ಲಿಕಾರ್ಜುನ, ಸಿಬ್ಬಂದಿ ವೆಂಕಟೇಶ, ವಿನಯಕುಮಾರ, ತೇಜಸ್ವಿನಿ, ಬಸಮ್ಮ, ಮಹೇಂದ್ರಮಣಿ, ಅಶ್ವಿನಿ, ಪಿಡಿಒ ಸಂಘದ ತಾಲೂಕು ಅಧ್ಯಕ್ಷ ಬಿ.ಭರತಕುಮಾರ ಸೇರಿ ಇತರರಿದ್ದರು.