ಮಹಾನಗರದಲ್ಲಿ ಅಬ್ಬರಿಸಿದ ಮಳೆ

ಹುಬ್ಬಳ್ಳಿ, ಮೇ 12: ಬಿರು ಬೇಸಿಗೆಯಿಂದ ತತ್ತರಿಸಿ ಹೋಗಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಶನಿವಾರ ಸಂಜೆ ಅಬ್ಬರದ ಗಾಳಿ, ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು.
ನಗರದಲ್ಲಿ ಭೀಕರ ಗಾಳಿಯಿಂದಾಗಿ ಪ್ಲೆಕ್ಸ್, ಬ್ಯಾನರ್‍ಗಳು ಗಾಳಿಗೆ ಹಾರಿದ ದೃಶ್ಯಗಳು ಅಲ್ಲಲ್ಲಿ ಕಂಡುಬಂದವು. ರಭಸದ ಮಳೆಯಿಂದಾಗಿ ನಗರದ ನೆಹರೂ ಮೈದಾನದ ರಸ್ತೆ, ದಾಜೀಬಾನ್ ಪೇಟ್, ಲಿಂಗರಾಜನಗರ ಹಾಗೂ ವಿವಿಧೆಡೆ ಮರಗಳು ಧರೆಗೆ ಉರುಳಿದ ಪರಿಣಾಮ ರಸ್ತೆ ಸಂಚಾರಕ್ಕೆ ಅಡೆತಡೆ ಉಂಟಾಗಿತ್ತು.
ಸ್ಮಾರ್ಟ್ ಸಿಟಿ ಹೆಗ್ಗಳಿಕೆ ಹೊಂದಿರುವ ಅವಳಿನಗರದ ಮುಖ್ಯ ರಸ್ತೆಯ ವಿದ್ಯಾನಗರ, ಉಣಕಲ್, ಅಮರಗೋಳದ ಬಿ.ಆರ್.ಟಿ.ಎಸ್ ಜಂಕ್ಷನ್ ನಲ್ಲಿ ಅಪಾರ ಪ್ರಮಾಣದ ನೀರು ನಿಂತ ಪರಿಣಾಮ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ವಾಹನ ಸಂಚಾರ ಸ್ಥಗಿತವಾಗಿತ್ತು. ಅಲ್ಲದೆ ಕೊಪ್ಪಿಕರ್ ರಸ್ತೆ, ಇಂದಿರಾ ಗ್ಲಾಸ್ ಹೌಸ್ ಬಳಿಯಲ್ಲಂತೂ ಬೈಕ್ ಹಾಗೂ ಕಾರ್‍ಗಳು ಮುಳುಗುವಷ್ಟು ನೀರು ನಿಂತು, ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗಿತ್ತು.
ಕೆಲ ತೆಗ್ಗು ಪ್ರದೇಳಗಳಲ್ಲಿನ ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ತೊಂದರೆ ಉಂಟಾಯಿತು. ಮಳೆ ನೀರು ಹೊರತೆಗೆಯಲು ಜನತೆ ಹರಸಾಹಸ ಪಟ್ಟರು.
ಮಳೆಯಿಂದಾಗಿ ಮನೆ ಹಾಗೂ ಅಂಗಡಿಗಳಿಗೆ ಚರಂಡಿ ನೀರು ನುಗ್ಗಿದ ಪರಿಣಾಮ ನೀರು ಹೊರ ಹಾಕುವಲ್ಲಿಯೇ ಜನತೆ ಹರಸಾಹಸಪಟ್ಟರಲ್ಲದೆ, ನಗರದ ಉತ್ತರ ಸಂಚಾರಿ ಪೆÇಲೀಸ್ ಠಾಣೆಯ ಮುಂಭಾಗ ನಿಲ್ಲಿಸಿದ ವಾಹನಗಳು ಜಲಾವೃತಗೊಂಡಿದ್ದವು. ಠಾಣೆಯ ಆವರಣ ಅಕ್ಷರಶಃ ಕೆರೆಯಂತಾಗಿದ್ದುದು, ಕಂಡುಬಂದಿತು. ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಿದ್ದ ಪರಿಣಾಮ ಸ್ಥಳೀಯರು ಆತಂಕಕ್ಕೀಡಾಗುವಂತಾಯಿತು.