ಪರಿಸರದ ಸಮತೋಲನೆಯಲ್ಲಿ ನದಿಗಳ ಪಾತ್ರ ಅನನ್ಯ
ಕಲಬುರಗಿ:ಸೆ.22: ಮಾನವನಿಗೆ ಅವಶ್ಯಕವಾಗಿ ಬೇಕಾಗುವ ನೀರನ್ನು ಪೂರೈಸುವ ನದಿಗಳು ಅಮೂಲ್ಯವಾದ ನೈಸರ್ಗಿಕ ಸಂಪತ್ತಾಗಿವೆ. ಮಳೆಯ ರೂಪದಲ್ಲಿ ಭೂಮಿಯ ಮೇಲೆ ಸುರಿಯುವ ನೀರನ್ನು ಶೇಖರಿಸಿ ಸುತ್ತ-ಮುತ್ತಲಿನ ಪ್ರದೇಶಗಳಿಗೆ ನೀರಾವರಿಯನ್ನು ಒದಗಿಸುತ್ತವೆ. ಪರಿಸರವನ್ನು ಸಮತೋಲ ಸ್ಥಿತಿಯಲ್ಲಿರಲು ನದಿಗಳ ಪಾತ್ರ ಪ್ರಮುಖವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ತಾಲೂಕಿನ ಕುಮಸಿ ಗ್ರಾಮದ ಕೆರೆಯ ದಡದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ವಿಶ್ವ ನದಿಗಳ ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ವಿಶ್ವದ ಅರ್ಧದಷ್ಟು ಜನರು ಕರಾವಳಿಯ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಜೀವನಾಧಾರವೆಂದರೆ ಕೆರೆ, ಸಮುದ್ರ, ಸಾಗರಗಳಾಗಿದ್ದು, ಪ್ರಮುಖ ಉದ್ಯೋಗವೆಂದರೆ ಮೀನುಗಾರಿಕೆಯಾಗಿದೆ. ಜೊತೆಗೆ ಉಪ್ಪು, ಚಿಪ್ಪು, ಮುತ್ತು, ವಜ್ರ, ವೈಡುರ್ಯ, ಪೆಟ್ರೋಲಿಯಂಗಳಂತಹ ಅಮೂಲ್ಯವಾದ ಸಂಪತ್ತನ್ನು ಒದಗಿಸಿಕೊಡುವ ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುತ್ತವೆ. ಕೆರೆ, ನದಿಗಳು, ಸಾಗರ ಹಾಗೂ ಸಮುದ್ರಗಳನ್ನು ಮಲಿನಗೊಳಿಸದೆ ಸ್ವಚ್ಚತೆಯನ್ನು ಕಾಪಾಡಬೇಕು. ನದಿಗಳು ಜಲವಿದ್ಯುತ್ ಉತ್ಪಾದನೆ, ನೀರಾವರಿ, ಕುಡಿಯುವ ನೀರು, ಪ್ರವಾಹ ನಿಯಂತ್ರಣ, ಪ್ರವಾಸೋದ್ಯಮ ಸೇರಿದಂತೆ ಮುಂತಾದವುಗಳಿಗೆ ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಕೃಷಿ ಅದಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ರಾಜಕುಮಾರ ಮಚೆಟ್ಟಿ, ವಿರಾಟ್ ಆರ್.ಮಚೆಟ್ಟಿ, ಶ್ರೀಮಂತ ರಾಣಪುರ, ಕಲ್ಯಾಣರಾವ ಕರಪಾಕಿ ಸೇರಿದಂತೆ ಇನ್ನಿತರರಿದ್ದರು.