ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಸಲಹೆ
ಕಲಬುರಗಿ:ಸೆ.22: ರೈತರು ಯಾವುದೇ ಒಂದು ಬೆಳೆಯ ಮೇಲೆ ಸಂಪೂರ್ಣವಾಗಿ ಅವಲಂಬಿಸಬಾರದು. ವಿವಿಧ ಬೆಳೆಗಳು, ತರಕಾರಿ, ಹಣ್ಣುಗಳು, ಹೂವುಗಳ ಕೃಷಿ ಮಾಡಬೇಕು. ಒಂದು ವೇಳೆ ಒಂದು ಬೆಳೆ ವಿಫಲವಾದರೆ, ಮತ್ತೊಂದು ಬೆಳೆಯಲು ಮತ್ತು ವರ್ಷಪೂರ್ತಿ ಇಳುವರಿ ಸಾಧ್ಯವಾಗುತ್ತದೆ. ಸಾವಯುವ ಗೊಬ್ಬರದ ಬಳಕೆ, ಬೀಜೋಪಚಾರ, ಹೊಸ ತಂತ್ರಜ್ಞಾನದ ಬಳಕೆ, ಸುಧಾರಿತ ಬೀಜಗಳ ಬಳಕೆ, ನಿಯಮಿತವಾಗಿ ಮಣ್ಣಿನ ಪರೀಕ್ಷೆ, ಕೃಷಿಯ ಜೊತೆ ಹೈನುಗಾರಿಕೆ, ತೋಟಗಾರಿಕೆ, ಕೋಳಿ, ಕುರಿ ಸಾಕಾಣಿಕೆಯ ಸಮಗ್ರ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ಕೃಷಿ ಉದ್ಯಮವಾಗಲು ಸಾಧ್ಯವಿದೆ ಎಂದು ನಿವೃತ್ತ ಕೃಷಿ ಅದಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ ರೈತರಿಗೆ ಸಲಹೆ ನೀಡಿದರು.
ತಾಲೂಕಿನ ಗಣಜಲಖೇಡ ಗ್ರಾಮದ ಪ್ರಗತಿಪರ ರೈತ ಚಿತಂಬರರಾವ್ ಮಚೆಟ್ಟಿ ಮತ್ತು ಶರಣಬಸಪ್ಪ ಮಚೆಟ್ಟಿ ಸಹೋದರರ ತೋಟಕ್ಕೆ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ಕ್ಷೇತ್ರ ಭೇಟಿ ಕಾರ್ಯಕ್ರಮ’ದಲ್ಲಿ ಅವರು ಮಾತನಾಡುತ್ತಿದ್ದರು.
ಪ್ರಗತಿಪರ ಯುವ ರೈತ ರಾಜಕುಮಾರ ಮಚೆಟ್ಟಿ ಮಾತನಾಡಿ, ಕೃಷಿಯಲ್ಲಿ ಕಷ್ಟಪಟ್ಟು ದುಡಿದರೆ ನಷ್ಟವಿಲ್ಲ. ಕೃಷಿ ವಿಜ್ಞಾನಿಗಳ ಸಲಹೆ ಪಡೆಯಬೇಕು. ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೆಕು. ಜೈವಿಕ ಕೀಟನಾಶಕಗಳನ್ನು ಬಳಕೆ, ಬೆಳೆ ಬದಲಾವಣೆ ಪದ್ಧತಿ ಅವಶ್ಯಕವಾಗಿದೆ. ನಮ್ಮ ತೋಟದಲ್ಲಿ ಪ್ರಸ್ತುತವಾಗಿ ಪಪಾಯಿ ಬೆಳೆಯಲಾಗಿದ್ದು, ಫಸಲು ಪಡೆಯಲಾಗುತ್ತಿದೆ. ಇಲ್ಲಿಂದ ದೆಹಲಿಗೆ ರಫ್ತು ಮಾಡಲಾಗುತ್ತಿದ್ದು, ಒಳ್ಳೆಯ ಆದಾಯ ಬರುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ, ಪ್ರಗತಿಪರ ರೈತರಾದ ಚಿತಂಬರರಾವ್ ಮಚೆಟ್ಟಿ, ಶರಣಬಸಪ್ಪ ಮಚೆಟ್ಟಿ, ಚಿತ್ರಾಬಾಯಿ ಮಚೆಟ್ಟಿ, ರಾಜಕುಮಾರ ಮಚೆಟ್ಟಿ, ವಿರಾಟ್ ಆರ್.ಮಚೆಟ್ಟಿ, ಸಂಜುಕುಮಾರ ಸನಾದಿ, ಸುರೇಶ ಒಡೆಯರ್ ಸೇರಿದಂತೆ ಮತ್ತಿತರರಿದ್ದರು.