ಪ್ರಜ್ವಲ್ ಪ್ರಕರಣದಲ್ಲಿ ಡಿಸಿಎಂ ಪಾತ್ರವಿಲ್ಲ: ರಾಜೇಶ್
ಸಂಜೆವಾಣಿ ನ್ಯೂಸ್
ಮೈಸೂರು.ಮೇ.12:-ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಇದರಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಪಾತ್ರವೇನೂ ಇಲ್ಲ ಎಂದು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ಎಸ್. ರಾಜೇಶ್ ನುಡಿದರು.
ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಜೆಡಿಎಸ್‍ನವರಿಗೆ ಸಾಮಾಜಿಕ ಕಾಳಜಿ ಇದ್ದಲ್ಲಿ ಮಹಿಳೆಯರ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ, ಪೆನ್‍ಡ್ರೈವ್ ಪ್ರಕರಣದ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವ ಬಗ್ಗೆ ಹೋರಾಟ ನಡೆಸಲಿ ಎಂದು ಆಗ್ರಹಿಸಿದರು.
ಅಲ್ಲದೆ, ಮಣಿಪುರದಲ್ಲಿ ಹಾಡಹಗಲೇ ಮಹಿಳೆಯನ್ನು ಬೆತ್ತಲೆಗೊಳಿಸಿ ನಡುಬೀದಿಯಲ್ಲಿ ಕರೆದೊಯ್ದ ವೇಲೆ ಜೆಡಿಎಸ್‍ನ ಮುಖಂಡರಾದ ಸಾ.ರಾ. ಮಹೇಸ್, ಜಿಟಿ. ದೇವೇಗೌಡ ಮೊದಲಾದವರು ಏಕೆ ಮಾತನಾಡಲಿಲ್ಲ. ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಏಕೆ ಆಗ್ರಹಿಸಲಿಲ್ಲ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್‍ಟಿ ಬಾಕಿ, ಅನುದಾನಗಳ ಬಗ್ಗೆ ಏಕೆ ಇವರು ಮಾತೆತ್ತಲಿಲ್ಲ ಎಂದು ಪ್ರಶ್ನಿಸಿದರು.
ಬಳಿಕ, ಜೆಡಿಎಸ್ ಪಕ್ಷದ ಎಂಪಿ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಸಿಲುಕಿಕೊಂಡಿರುವುದರಿಂದ ಗಮನ ಬೇರೆಡೆ ಸೆಳೆಯಲು ಈಗ ಪ್ರತಿಭಟನೆ ನಡೆಸುತ್ತಿದ್ದಾರೆಂದು ಆರೋಪಿಸಿದರು.
ಕುರುಬಾರಹಳ್ಳಿ ಪ್ರಕಾಶ್ ಹಾಗೂ ಇನ್ನಿತರರು ಇದ್ದರು.