ಸುಳ್ಳು ಪ್ರಮಾಣ ಪತ್ರ ನೀಡಿದ ಅಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.12:- ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಪಂಗೆ ಸೇರಿದ ವಾರ್ಡ್ ಸಂಖ್ಯೆ ಎರಡರ ಮೀಸಲು ಕ್ಷೇತ್ರದಲ್ಲಿ 2020 ರ ಮೇ ನಲ್ಲಿ ನಡೆದ ಚುನಾವಣೆ ವೇಳೆ ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಕಾರಣ ಆರ್. ರೇಖಾ ಅವರ ಆಯ್ಕೆಯನ್ನು ಅಸಿಂಧುಗೊಳಿಸಲಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ ಅಧಿಕಾರಿ ವರ್ಗದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ದಲಿತ ಚಳವಳಿ ನವನಿರ್ಮಾಣ ವೇದಿಕೆ ಆಗ್ರಹಿಸಿದೆ.
ಈ ಕುರಿತು ನಗರದಲ್ಲಿ ಮುಖಂಡರಾದ ಸೀಗೂರು ವಿಜಯಕುಮಾರ್ ಮಾತನಾಡಿ, ಆರ್. ರೇಖಾ ಅವರ ಮೂಲ ಹೆಸರು ರುಕ್ಸರ್ ಆಗಿದೆ. ಇವರ ತಂದೆ ರೆಹಮಾನ್ ಆಗಿದ್ದು, ಬೈಲಕುಪ್ಪೆಯಲ್ಲಿನ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಚುನಾವಣೆವರೆಗೂ ಈ ಮಾಹಿತಿ ಯಾರಿಗೂ ತಿಳಿದಿರಲಿಲ್ಲ. ಆದರೆ ಚುನಾವಣೆ ದಿನದಂದು ಇವರು ಸುಳ್ಳು ಜಾತಿ ಪ್ರಮಾಣಪತ್ರ ನೀಡಿರುವುದು ಗಮನಕ್ಕೆ ಬಂದಿದೆ.
ಬಳಿಕ ನೀಡಿದ ದೂರಿನ ಅಡಿಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ತಂಡ ತನಿಕೆ ನಡೆಸಿದಾಗ ಸುಳ್ಳು ಜಾತಿ ಪ್ರಮಾಣಪತ್ರ ನೀಡಿರುವುದು ದೃಢವಾಗಿದೆ. ಆದ್ದರಿಂದ ಸಂಬಂಧಪಟ್ಟ ತಹಸಿಲ್ದಾರ್, ರೆವಿನ್ಯೂ ಇನ್‍ಸ್ಪೆಕ್ಟರ್, ಗ್ರಾಮ ಲೆಖ್ಖಿಗರ ವಿರುದ್ಧ ಕ್ರಮ ಕೈಗೊಳ್ಳಬೇಕು. ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದ ಅನಿತಾ ನಾರಾಯಣ್ ಅವರು ಚುನಾಯಿತರಾಗಿದ್ದಾರೆಂದು ಘೋಷಿಸಬೇಕೆಂದು ಆಗ್ರಹಿಸಿದರು.
ಅನಿತಾ ನಾರಾಯಣ್, ಎಚ್.ಡಿ. ರಮೇಶ್, ಭೂತನಹಳ್ಳಿ ಶಿವಣ್ಣ, ಸಿ.ಜೆ. ರವಿ ಹಾಜರಿದ್ದರು.