891ನೇ ಬಸವ ಜಯಂತಿ ಉತ್ಸವ
ಬೀದರಃಮೇ.12: ನಗರದ ಗುಮ್ಮೆ ಕಾಲೋನಿಯ ಜೈ ಹನುಮಾನ ಮಂದಿರದಲ್ಲಿ ಇಂದು ಬೆಳಿಗ್ಗೆ 9.30 ಗಂಟೆಗೆ 891ನೇ ಬಸವ ಜಯಂತಿ ಉತ್ಸವ ಕಾರ್ಯಕ್ರಮವನ್ನು ರಾಧಾಕೃಷ್ಣ ಮಹಿಳಾ ಕೋಲಾಟ ಸಂಘ ಹಾಗೂ ಅಕ್ಕನಾಗಮ್ಮ ಸಾಂಸ್ಕøತಿಕ ಸಂಘದ ಸಂಯುಕ್ತಾಶ್ರಯದಲ್ಲಿ ಜರುಗಿತು. ಇದೇ ಸಂದರ್ಭದಲ್ಲಿ ಬೆಳಿಗ್ಗೆ ಷಟಸ್ಥಲ ಧ್ವಜಾರೋಹಣ, ಗುರು ಬಸವ ಪ್ರಾರ್ಥನೆ ಮತ್ತು ತೊಟ್ಟಿಲು ಕಾರ್ಯಕ್ರಮವನ್ನು ಶರಣೆ ಲಕ್ಷ್ಮೀಬಾಯಿ ಬಿರಾದಾರ, ಗೀತಾ ಪಾಟೀಲ್, ಶ್ರೀದೇವಿ ಬಿರಾದಾರ, ಮಹಾದೇವಿ ಬಿರಾದಾರ, ಭಾರತಿ ಬಿರಾದಾರ ಮುಂತಾದವರು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಬಸವ ಜಯಂತಿ ಉತ್ಸವ ಕುರಿತು ಪ್ರೊ. ಉಮಾಕಾಂತ ಮೀಸೆಯವರು ಮಾತನಾಡಿ, 12ನೇ ಶತಮಾನದಲ್ಲಿ ನಡೆದ ವೈಚಾರಿಕ ಕ್ರಾಂತಿಯು ಸ್ತ್ರೀ ಸಮಾನತೆ, ಜಾತಿ ರಹಿತ ಸಮಾಜ, ಏಕದೇವೋಪಾಸನೆ, ಕಾಯಕ ದಾಸೋಹ ಸಿದ್ಧಾಂತ, ಆಧಾತ್ಮಿಕ ಮತ್ತು ಸಾಮಾಜಿಕ ಸಮಾನತೆಗಾಗಿ ಬಸವಾದಿ ಶರಣರು ಅನುಭವ ಮಂಟಪ ಎಂಬ ಮಹಾಮನೆಯಲ್ಲಿ ನಿರಂತರ ಅನುಭಾವದ ಚಿಂತನೆ ನಡೆಸಿ ಜೀವನದ ಮೌಲ್ಯವನ್ನು ನೈತಿಕತೆಯ ನೆಲೆಗಟ್ಟಿನ ಮೇಲೆ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಸಮಾಜ ನಿರ್ಮಾಣಕ್ಕಾಗಿ ಬಸವಣ್ಣನವರು ತಮ್ಮ ವಚನಗಳ ಮೂಲಕ ಚಿಂತನೆಗಳನ್ನು ಸಮಾಜಕ್ಕೆ ನೀಡಿದ್ದು ಇತಿಹಾಸದ ಪುಟದಲ್ಲಿ ಸುವರ್ಣ ಅಕ್ಷರಗಳಿಂದ ಬರೆಯಲ್ಪಟ್ಟಿದೆ ಎಂದು ಅಭಿಪ್ರಾಯಪಟ್ಟರು.
ಬಸವಣ್ಣನವರ ಜಯಂತಿಯ ಅಂಗವಾಗಿ ರಾಧಾಕೃಷ್ಣ ಕೋಲಾಟ ಸಂಘದ ಮಹಿಳಾ ಕಲಾವಿದರಿಂದ ಆಕರ್ಷಕ ಕೋಲಾಟ ಪ್ರದರ್ಶನವನ್ನು ಬಸವಣ್ಣವನರ ವಚನಗಳ ಆಧಾರದ ಮೇಲೆ ನಡೆಸಿಕೊಟ್ಟಿರುವುದು ಸಭಿಕರಿಗೆ ಮನರಂಜಿಸುವಂತಾಗಿತ್ತು. ಈ ಕೋಲಾಟದ ವೈಶಿಷ್ಟ್ಯತೆ ಬಸವಾದಿ ಶರಣರ ವಚನಗಳನ್ನು ಕೋಲಾಟದ ಮುಖಾಂತರ ಸಮಾಜಕ್ಕೆ ಪ್ರತಿಬಿಂಬಿಸುತ್ತಿರುವುದು ವಿನೂತನವಾದ ಪದ್ಧತಿಯಾಗಿದ್ದು, ಇದು ಮುಂಬರುವ ಪೀಳಿಗೆಗೆ ಮಾದರಿಯಾಗಲು ಸಾಧ್ಯವಾಗಿದೆ ಎಂದು ಕೋಲಾಟ ಸಂಘದ ಅಧ್ಯಕ್ಷೆ ಗೀತಾ ಪಾಟೀಲ್ ಹೇಳಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಗುರುನಾಥ ಬಿರಾದಾರ, ಶ್ರೀ ವೈಷ್ಣೋದೇವಿ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಿರಾದಾರ, ಧೂಳಪ್ಪ ಜೊತೆಪನೋರ, ಧನಶೆಟ್ಟಿ ಮದರಗಾವೆ, ರವಿ ಮೂಲಗೆ, ಬಸವರಾಜ, ಕೋಲಾಟ ಶಿಕ್ಷಕರಾದ ನೂರಂದಪ್ಪ, ಸಿದ್ರಾಮಯ್ಯ ಹಿರೇಮಠ, ಶಿವಕುಮಾರ, ಮಡೆಪ್ಪಾ, ರಾಜಕುಮಾರ, ಗಣಪತಿ, ಶರಣೆ ರೇಖಾ, ಕವಿತಾ ಸ್ವಾಮಿ, ಜ್ಯೋತಿ ನಿನ್ನೆ, ಮಲ್ಲಮ್ಮಾ ಬಿರಾದಾರ, ವಿಜಯಲಕ್ಷ್ಮೀ ಮೂಲಗೆ, ಸಂಗೀತಾ ಪಾಟೀಲ್, ಕಲ್ಪನಾ ಅಬ್ಯಂದೆ, ಕಾವ್ಯ ಬಿರಾದಾರ, ಸಂಗೀತಾ ದಾನಿ, ಶಶಿಕಲಾ ಗಾದಗಿ, ಮಹಾನಂದಾ ಕೋಟೆ ಮುಂತಾದವರು ಉಪಸ್ಥಿತರಿದ್ದರು.