ಭರತಖಂಡವು ಪ್ರಪಂಚದಲ್ಲಿಯೇ ಅತ್ಯಂತ ಪುಣ್ಯಭೂಮಿ: ಶಿವಕುಮಾರ ಶ್ರೀ
ಕಲಬುರಗಿ:ಮೇ.11: ಪ್ರಪಂಚದಲ್ಲೇ ನಮ್ಮ ಭರತಖಂಡವು ಅತ್ಯಂತ ಪುಣ್ಯಮಯ ಭೂಮಿಯಾಗಿದ್ದು ಸಮಸ್ತ ಮನುಕುಲ ಒಳಿತು ಬಯಸುವ ಇಲ್ಲಿನ ಸದ್ಭಾವನೆ, ಚಿಂತನೆ ಮತ್ತು ನಮ್ಮಲ್ಲಿನ ಆಧ್ಯಾತ್ಮ ಮತ್ತು ಸಂಸ್ಕøತಿ, ಸಂಸ್ಕಾರ ವಿಶ್ವಕ್ಕೆ ಪ್ರೇರಣೆಯಾಗಿದೆ ಎಂದು ಬೀದರ್ ಚಿದಂಬರ್ ಆಶ್ರಮ, ಸಿದ್ದಾರೂಢ ಮಠದ ಪೀಠಾಧಿಪತಿ ಶಿವಕುಮಾರ್ ಮಹಾಸ್ವಾಮಿಗಳು ಬಣ್ಣಿಸಿದರು.
ತಾಲ್ಲೂಕಿನ ತಾಜಸುಲ್ತಾನಪುರದ ಚಿನ್ನದಕಂತಿ ಶ್ರೀ ಚಿಕ್ಕವೀರೇಶ್ವರ್ ಹಿರೇಮಠದಲ್ಲಿ ಪೀಠಾಧಿಪತಿ ಡಾ: ರೇವಣಸಿದ್ದ ಶಿವಾಚಾರ್ಯರ ಷಷ್ಠಿಪೂರ್ತಿ ಸಮಾರಂಭದಲ್ಲಿ ಶ್ರೀಮಠದ ಪ್ರತಿಷ್ಠಿತ ಚಿನ್ನದಕಂತಿ ಪ್ರಶಸ್ತಿ ಸ್ವೀಕರಿಸಿ ಆಶೀರ್ವಚನ ನೀಡಿದ ಅವರು, ನಮ್ಮಲ್ಲಿನ ಋಷಿ ಮುನಿಗಳು, ಯತಿಗಳು, ಆಧ್ಯಾತ್ಮ ಸಾಧಕರು ವೇದ, ಆಗಮ, ಉಪನಿಷತ್ತ್ತುಗಳಲ್ಲಿ ಜಗತ್ತಿಗೆ ಸಕಾರಾತ್ಮಕವಾದಂತಹ ಸಂದೇಶ ಸಾರಿ ಹೋಗಿದ್ದು ಅದರಿಂದ ಪ್ರತಿ ಮನುಷ್ಯ ನೆಮ್ಮದಿಯಿಂದ ಬದುಕು ಸಾಧಿಸಲು ಸಾಧ್ಯವೆಂದು ನಮಗೂ ಮತ್ತು ವಿಶೇಷವಾಗಿ ವಿದೇಶಿಯರಿಗೆ ಅರ್ಥವಾಗಿರುವುದರಿಂದ ವೇದಗಳ ಹಾಗೂ ಆಧ್ಯಾತ್ಮದ ಕುರಿತು ಅತಿ ಹೆಚ್ಚಿನ ಆಸಕ್ತಿಯನ್ನು ವಿದೇಶಿಗರು ತೋರಿಸುತ್ತಿರುವುದೇ ಸಾಕ್ಷಿಯಾಗಿದೆ ಎಂದರು.
ವೈಭವ ಮತ್ತು ವೈರಾಗ್ಯವನ್ನು ಭರತಖಂಡದಲ್ಲಿ ಮಾತ್ರ ಕಾಣಲು ಸಾಧ್ಯವೆಂದು ಹೇಳಿದ ಅವರು, ಮಠ-ಮಂದಿರಗಳು, ಆಧ್ಯಾತ್ಮ ಕೇಂದ್ರಗಳು ಜನತೆಯ ಬದುಕನ್ನು ಹಸನು ಮಾಡುವ ಸಲುವಾಗಿ ಹಗಲಿರುಳು ಶ್ರಮವಹಿಸುತ್ತಿವೆ. ಗುರು ಮಾರ್ಗದರ್ಶನದಿಂದ ಮಾತ್ರ ಬದುಕು ಹಸನಾಗಲು ಸಾಧ್ಯ ಎಂದು ತಿಳಿಸಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಮಠದ ಪೀಠಾಧಿಪತಿ ರೇವಣಸಿದ್ದ ಶಿವಾಚಾರ್ಯರು ಮಾತನಾಡಿ, ಬೀದರ್ ಶಿವಕುಮಾರ್ ಮಹಾಸ್ವಾಮಿಗಳ ಆಧ್ಯಾತ್ಮ ಮತ್ತು ಸಮಾಜ ಸೇವೆಯನ್ನು ಗುರುತಿಸಿ ಪ್ರತಿಷ್ಠಿತಿ ಶ್ರೀಮಠದ ಚಿನ್ನದಕಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದ್ದು, ಆಧ್ಯಾತ್ಮ ಕ್ಷೇತ್ರದ ಇಂದಿನ ಯುವ ಯತಿಗಳಿಗೆ ಶಿವಕುಮಾರ್ ಮಹಾಸ್ವಾಮಿಗಳ ಪ್ರೇರಣೆಯಾಗಲಿದೆ ಎಂದರು.
ಮಾಜಿ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ಮಾತನಾಡಿ, ನಾಡಿನ ವೀರಶೈವ ಲಿಂಗಾಯತ ಮಠಮಾನ್ಯಗಳು ಶತಶತಮಾನಗಳಿಂದ ಆಧ್ಯಾತ್ಮ ಬೋಧನೆಯೊಂದಿಗೆ ಅನ್ನ, ಅಕ್ಷರ, ಆಶ್ರಯ, ಔಷಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉತ್ತಮವಾದ ಸಮಾಜ ನಿರ್ಮಿಸಲು ಹಗಲಿರುಳು ಶ್ರಮಿಸುತ್ತಿವೆ ಎಂದರು.
ಸಮಾರಂಭದಲ್ಲಿ ಹರಸೂರ್ ಕಲ್ಮಠದ ಕರಿಬಸವ ಶಿವಾಚಾರ್ಯರು, ಕಪನೂರದ ಮಲ್ಲಿಕಾರ್ಜುನ್ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್, ಜ್ಞಾನಭಾರತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕಲ್ಯಾಣಪ್ಪಾ ಬುಜುರ್ಕೆ, ಸಾಹಿತಿ ಬಿ.ಹೆಚ್. ನಿರಗುಡಿ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ನ್ಯಾಯವಾದಿ ಹಣಮಂತ್ರಾಯ್ ಅಟ್ಟೂರ್ ಅವರು ಸ್ವಾಗತಿಸಿದರು, ನಾಗಲಿಂಗಯ್ಯ ಮಠಪತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಶಹಾಪೂರಕರ್ ಅವರು ಕಾರ್ಯಕ್ರಮ ನಿರೂಪಿಸಿದರು, ಗುರು ಹಾಂವಾ ಅವರು ವಂದಿಸಿದರು. ಸಮಾರಂಭದಲ್ಲಿ ಉಭಯ ಪೂಜ್ಯರಿಗೆ ಭಕ್ತಾದಿಗಳಿಂದ ಭಕ್ತಿಯ ತುಲಾಭಾರ ನೆರವೇರಿತು. ತಾಜಸುಲ್ತಾನಪೂರ್ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಸದ್ಭಕ್ತಾದಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.