ಕಾರು ವ್ಯಾಪಾರಿ ಸೇರಿ ಮೂವರ ಅಪಹರಿಸಿ ಹಲ್ಲೆ: 7 ಜನರ ಬಂಧನ
ಕಲಬುರಗಿ,ಮೇ.11-ಹಣಕ್ಕಾಗಿ ಬೇಡಿಕೆ ಇಟ್ಟು ಸಕೆಂಡ್ ಹ್ಯಾಂಡ್ ಕಾರು ವ್ಯಾಪಾರಿ ಸೇರಿ ಮೂವರ ಅಪಹರಿಸಿ ಮನೆಯಲ್ಲಿ ಕೂಡಿ ಹಾಕಿ ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಮತ್ತು ಮರ್ಮಾಂಗಕ್ಕೆ ಕರೆಂಟ್ ಶಾಕ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಠಾಣೆ ಪೊಲೀಸರು 7 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ರಮೇಶ ಎಂಬಾತನಿಗೆ ಸಂಕೆಂಡ್ ಹ್ಯಾಂಡ್ ಕಾರು ತೋರಿಸಲು ಹೋದಾಗ, ಸಕೆಂಡ್ ಹ್ಯಾಂಡ್ ಕಾರು ವ್ಯಾಪಾರಿಯಾದ ಸೇಡಂ ತಾಲ್ಲೂಕಿನ ದೇವನೂರ ಗ್ರಾಮದ ಅರ್ಜುನಪ್ಪ ಹಣಮಂತ ಮಡಿವಾಳ (30), ಹೀರಾಪುರದ ಅಬ್ದುಲ್ ರಹೆಮಾನ್ ಮತ್ತು ಇಸ್ಲಾಮಾಬಾದ್ ಕಾಲೋನಿಯ ಮಹ್ಮದ್ ಸಮೀರೋದ್ದೀನ್ ಅವರನ್ನು ಅಪಹರಿಸಿ ಹಾಗರಗಾ ಕ್ರಾಸ್‍ನಲ್ಲಿರುವ ಮನೆಯಲ್ಲಿ ಕೂಡಿ ಹಾಕಿ ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಮತ್ತು ಮರ್ಮಾಂಗಕ್ಕೆ ಕರೆಂಟ್ ಶಾಕ್ ನೀಡಿದ ಘಟನೆಯ ವಿಡಿಯೋ ವೈರಲ್ ಆಗಿತ್ತು. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಠಾಣೆ ಪೊಲೀಸರು ತನಿಖೆ ನಡೆಸಿ ಇಮ್ರಾನ್ ಪಟೇಲ್, ಮಹ್ಮದ್ ಮತೀನ್ ಅಲಿಯಾಸ್ ಸ್ಟೀಲ್ ಮತೀನ್, ಮಹ್ಮದ್ ಜಿಯಾವುಲ್ ಹುಸೇನ್, ಮಹ್ಮದ್ ಅಫ್ಜಲ್ ಶೇಖ್, ಹುಸೇನ್ ಶೇಖ್, ರಮೇಶ ದೊಡ್ಡಮನಿ ಮತ್ತು ಸಾಗರ ಕೋಳಿ ಎಂಬುವವರನ್ನು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಇನ್ನೂ ನಾಲ್ಕೈದು ಜನ ಆರೋಪಿಗಳು ಭಾಗಿಯಾಗಿದ್ದು, ಅವರ ಪತ್ತೆಗೂ ಪೊಲೀಸರು ಜಾಲ ಬೀಸಿದ್ದಾರೆ.