ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ ನಾಪತ್ತೆ
ಕಲಬುರಗಿ,ಮೇ.11-ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಘಟನೆ ಸೇಡಂ ರಸ್ತೆಯ ಸಿದ್ದೇಶ್ವರ ಕಾಲೋನಿಯಲ್ಲಿ ನಡೆದಿದೆ.
ವಿಕಾಸ ಶಿವಕುಮಾರ ಕಣಮಸ್ (16) ಕಾಣೆಯಾದ ವಿದ್ಯಾರ್ಥಿ.
ಮೇ.8 ರಂದು ಬೆಳಿಗ್ಗೆ 10.30ಕ್ಕೆ ಹೊರಗಡೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರ ಹೋದವನು ಮರಳಿ ಮನೆಗೆ ಬಂದಿಲ್ಲ. ಕಾಣೆಯಾದ ವಿದ್ಯಾರ್ಥಿಯು ದುಂಡು ಮುಖ, ತೆಳ್ಳನೆಯ ಸದೃಢವಾದ ಮೈಕಟ್ಟು, ಸಾದಾ ಕಪ್ಪು ಬಣ್ಣ ಹೊಂದಿದ್ದು, 5 ಅಡಿ 6 ಇಂಚು ಎತ್ತರವಿದ್ದಾನೆ. ಡಾರ್ಕ್ ಗ್ರೀನ್ ಟೀ-ಶರ್ಟ್ ಮತ್ತು ಬೂದು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ. ವಿದ್ಯಾರ್ಥಿಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.
ಮಷೀನ್ ಕಳವು
ಏರ್ಟೇಲ್ ಟವರ್‍ಗೆ ಅಳವಡಿಸಿದ್ದ 60 ಸಾವಿರ ರೂ.ಮೌಲ್ಯದ ಆರ್‍ಆರ್‍ಯು ಟವರ್ ಸಿಗ್ನಲ್ ಕೊಡುವ ಮಷೀನ್ ಕಳವು ಮಾಡಿರುವ ಘಟನೆ ಕೋಟನೂರ (ಡಿ) ಗ್ರಾಮದ ಹಿಂದುಗಡೆ ಇರುವ ವೆಂಕಟಗಿರಿ ಲೇಔಟ್‍ನಲ್ಲಿ ನಡೆದಿದೆ.
ಈ ಸಂಬಂಧ ಏರ್ಟೇಲ್ ಕಂಪನಿಯಲ್ಲಿ ಕ್ಲಸ್ಟರ್ ಇನ್‍ಚಾರ್ಜ್ ಆಗಿರುವ ಶಿವಕುಮಾರ ಮಾಮಾನೆ ಎಂಬುವವರು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಕೋಟನೂರ (ಡಿ) ಗ್ರಾಮದ ಹಿಂದುಗಡೆಯ ವೆಂಕಟಗಿರಿ ಲೇಔಟ್‍ನ ನಾಗೇಂದ್ರ ಬುತನಾಳ ಅವರ ಮನೆಯ ಮೇಲೆ ಹೊಸದಾಗಿ ಟವರ್ ಹಾಕುವ ಸಂಬಂಧ ಅಳವಡಿಸಿದ್ದ 60 ಸಾವಿರ ರೂಪಾಯಿ ಮೌಲ್ಯದ ಆರ್‍ಆರ್‍ಯು ಟವರ್ ಸಿಗ್ನಲ್ ಕೊಡುವ ಮಷೀನ್‍ನನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವಿಶ್ವವಿದ್ಯಾಲಯ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.