ಎಕಲಾರ ಸರ್ಕಾರಿ ಶಾಲೆಯಲ್ಲಿ ಬೇಸಿಗೆ ಶಿಬಿರ : ಪಾಲಕರ ಮೆಚ್ಚುಗೆ
ಔರಾದ್ :ಮೇ.11: ಬೇಸಿಗೆ ರಜೆಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಸಂಸ್ಥೆಗಳ ಬೇಸಿಗೆ ತರಬೇತಿ ಶಿಬಿರಗಳಿಗೆ ಮುಂದಿನ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಕಳಿಸುವುದು ಸಾಮಾನ್ಯ. ಆದರೆ ಇದಕ್ಕೆ ಅಪವಾದವೆಂಬಂತೆ ತಾಲೂಕಿನ ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಮಕ್ಕಳಿಗೆ ಒಂದು ತಿಂಗಳ ವಿಶೇಷ ಬೇಸಿಗೆ ವಿಜ್ಞಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಎಕಲಾರ ಪ್ರಾಥಮಿಕ ಶಾಲೆ ಹಾಗೂ ಅಗಸ್ತ್ಯ ಫೌಂಡೇಶನ್ ಮಿನಿ ವಿಜ್ಞಾನ ಕೇಂದ್ರ ಔರಾದ್ ಸಹಯೋಗದಲ್ಲಿ ಬೇಸಿಗೆ ವಿಜ್ಞಾನ ಶಿಬಿರ ಜರುಗಿತು. ಇಂಜಿನಿಯರಿಂಗ್ ಆಧಾರಿತ ವಿಜ್ಞಾನ ಕಲಿಕೆ (ಇಬಿಎಲ್) ಎಂಬ ವಿನೂತನ ಪರಿಕಲ್ಪನೆ ಅಡಿ ಮಕ್ಕಳಿಗೆ ಒಂದು ತಿಂಗಳ ನಿರಂತರ ಶಿಬಿರದಲ್ಲಿ ಮಕ್ಕಳ ಕೌಶಲ್ಯಗಳ ಅಭಿವೃದ್ಧಿ, ಆಟಗಳ ಮೂಲಕ ಕಲಿಕೆ, ಡಿಜಿಟಲ್ ಪ್ಲಾಟ್‍ಫಾರ್ಮ್ ಪಾಠ, ಸಂಪನ್ಮೂಲ ಬಳಸಿಕೊಳ್ಳುವ ಸಾಮಥ್ರ್ಯ, ಜ್ಞಾನ ಹಂಚಿಕೆಯ ಮೂಲಕ ಸ್ಥಳಿಯ ಉತ್ಪಾದನೆ ಸುಧಾರಿತ ಸಾಮಥ್ರ್ಯ ಅಭಿವೃದ್ಧಿಯನ್ನು ಒಳಗೊಂಡಿತ್ತು.
5ನೇ ತರಗತಿಯಿಂದ 9ನೇ ತರಗತಿವರೆಗಿನ ಮಕ್ಕಳಿಗೆ ಆಯೋಜಿಸಿದ ಈ ಉಚಿತ ಶಿಬಿರದಲ್ಲಿ ಸುಮಾರು 40ಕ್ಕೂ ಹೆಚ್ಚಿನ ಮಕ್ಕಳು ಪಾಲ್ಗೊಂಡು ಶಿಬಿರದ ಲಾಭ ಪಡೆದರು. ಮಕ್ಕಳು ಬೇಸಿಗೆ ರಜೆಯಲ್ಲಿ ಶಿಕ್ಷಣದಿಂದ ವಂಚಿತರಾಗಬಾರದು. ಹೊಲ ಮನೆ ಎಂದು ಕೆಲಸಕ್ಕೆ ಹೋಗದೇ ಶೈಕ್ಷಣಿಕವಾಗಿ ಮುಂದುವರಿಯಬೇಕು ಎಂಬ ಉದ್ದೇಶದಿಂದ ಬೇಸಿಗೆ ಶಿಬಿರ ನಡೆಸಲಾಗಿತ್ತು ಎನ್ನುತ್ತಾರೆ ವಿಜ್ಞಾನ ಶಿಕ್ಷಕ ಬಾಲಾಜಿ ಅಮರವಾಡಿ.
ಮಾರ್ಚ್ 30ರಿಂದ ಆರಂಭವಾಗಿ ನಿತ್ಯವೂ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯ ವರೆಗಿನ ಶಿಬಿರದಲ್ಲಿ ಔರಾದ್ ಮಿನಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ವಿರೇಶ ಪಾಂಚಾಳ ಮಕ್ಕಳಿಗೆ ಸುಮಾರು 20ಕ್ಕೂ ಅಧಿಕ ವಿಜ್ಞಾನದ ಮಾದರಿಗಳು ಮಾಡಲು ಕಲಿಸುವುದಲ್ಲದೇ ಅವುಗಳ ಲಾಭ ಮತ್ತು ಜೀವನದಲ್ಲಿ ಅಳವಡಿಕೆ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಅಲ್ಲದೇ ಇನ್ನಿತರ ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದಲೂ, ಶಾಲಾ ಶಿಕ್ಷಕರಿಂದಲೂ ಮಕ್ಕಳಿಗೆ ಚಟುವಟಿಕೆಗಳು ಮಾಡಿಸಲಾಗಿ ಶಿಬಿರ ಯಶಸ್ವಿಯಾಗಿ ಜರುಗಿತು. ಎಂದು ಮುಖ್ಯಶಿಕ್ಷಕ ಪ್ರಭು ಬಾಳೂರೆ ಮಾಹಿತಿ ನೀಡಿದರು.
ಶಿಬಿರದಲ್ಲಿ ಶಿಕ್ಷಕರಾದ ಜೈಸಿಂಗ್ ಠಾಕೂರ್, ವೀರಶೆಟ್ಟಿ ಗಾದಗೆ, ಅಂಕುಶ ಪಾಟೀಲ್, ರೂಪಾ ಇದ್ದರು.
ಮುಂದಿನ ವಿದ್ಯಾಭ್ಯಾಸಕ್ಕಾಗಿ ಅನುಕೂಲವಾಗಲೆಂದು ಸರ್ಕಾರಿ ಶಾಲೆಯಲ್ಲಿ ಬೇಸಿಗೆ ಶಿಬಿರ ಆಯೋಜನೆ ಮಾಡಿರುವುದು ಖುಷಿ ತಂದಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಉಪಯೋಗವಾಗಿದೆ.
ಶಿವಕುಮಾರ್, ಪಾಲಕರು
ಮಕ್ಕಳ ಆಸಕ್ತಿ, ಪಾಲಕರ ಮತ್ತು ಶಿಕ್ಷಕರ ಪೆÇ್ರೀತ್ಸಾಹ, ಗ್ರಾಮಸ್ಥರ ಸಹಕಾರ ಮತ್ತು ಎಕಲಾರ ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣವಿರುವ ಹಿನ್ನೆಲೆ ಶಿಬಿರ ಯಶಸ್ವಿಯಾಗಿ ಜರುಗಿದೆ.
ವಿರೇಶ ಪಾಂಚಾಳ, ವಿಜ್ಞಾನ ಕೇಂದ್ರದ ಮುಖ್ಯಸ್ಥ