ಬಸವಣ್ಣನವರ ತತ್ವದಿಂದ ಮಾನವ ಕಲ್ಯಾಣ ಸಾಧ್ಯವಾಗಿದೆ :ಪ್ರೊ. ದಯಾನಂದ ಅಗಸರ
ಕಲಬುರಗಿ:ಮೇ.11: 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರ ವೈಚಾರಿಕ ಚಿಂತನೆಗಳ ಮೂಲಕ ಮಾನವ ಕಲ್ಯಾಣ ಸಾಧ್ಯವಾಗಿದೆ. ಶರಣರ ವಚನಗಳಿಂದ ಆಧುನಿಕ ಸಾಹಿತ್ಯ ಕ್ಷೇತ್ರ ಪ್ರಖರವಾಗಿ ಬೆಳೆದಿದ್ದು, ವಚನಗಳಿಂದಲೇ ಸಮಾಜದಲ್ಲಿನ ಅಂಕು ಡೊಂಕುಗಳು ಸುಧಾರಣೆಯಾಗಿವೆ. ಬಸವಣ್ಣನವರ ಸಮಾನತೆ ತತ್ವದ ಸಾರವನ್ನು ವಿಶ್ವವೇ ಕೊಂಡಾಡುತ್ತಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ರಾಧಾಕೃಷ್ಣ ಸಭಾಂಗಣದಲ್ಲಿ ಆಯೋಜಿಸಿದ ಜಗಜ್ಯೋತಿ ಬಸವೇಶ್ವರರ 891ನೇ ಜಯಂತ್ಯುತ್ಸವ ಹಾಗೂ ಹೇಮರೆಡ್ಡಿ ಮಲ್ಲಮ್ಮ ಅವರ 602ನೇ ಜಯಂತ್ಯುತ್ಸವ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಬಸವಣ್ಣ ಹಾಗೂ ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಅವರು ಮಾತನಾಡಿದರು.
ಸಮಾಜದಲ್ಲಿನ ಅಸಮಾನತೆಯ ಏರಿಳಿತಗಳನ್ನು ಸುಧಾರಿಸಲು ಬಸವಣ್ಣನವರು ವಚನಗಳನ್ನು ರಚಿಸಿದರು. ಆಧುನಿಕ ಪ್ರಜಾಪ್ರಭುತ್ವ ಪರಿಕಲ್ಪನೆಯ ಸಂಸತ್ ಸ್ಥಾಪನೆ ಮೂಲಕ ವಿವಿಧ ವರ್ಗದ ಶರಣರನ್ನು ಒಗ್ಗೂಡಿಸಿ ಸರ್ವ ಜನರ ಏಳಿಗೆಗೆ ಶ್ರಮಿಸಿದರು. ಮನುಷ್ಯ ಕುಲದ ಶಾಸ್ವತ ಬದುಕಿನ ಮೌಲ್ಯಗಳನ್ನು ವಚನಸಾರಗಳಲ್ಲಿ ಪ್ರಚುರಪಡಿಸಿದರು. ಅವುಗಳ ತತ್ವ ಮತ್ತು ಚಿಂತನೆಗಳನ್ನು ಪ್ರತಿಯೊಬ್ಬ ವ್ಯಕ್ತಿ ಅನುಸರಿಸಿ ನಡೆದರೆ ಬದುಕು ಅರ್ಥಪೂರ್ಣವಾಗಲಿದೆ ಎಂದ ಅವರು ಸಾದ್ವಿ ಶರಣೆ ಹೇಮರೆಡ್ಡಿ ಮಲ್ಲಮ್ಮ ಅತ್ಯಂತ ತಾಳ್ಮೆ ವ್ಯಕ್ತಿತ್ವವುಳ್ಳ ಶಿವಶರಣೆಯಾಗಿದ್ದಾರೆ. ವಚನ ತತ್ವಗಳನ್ನು ಅಕ್ಷರಶಃ ಪಾಲಿಸಿದ ಮಹಸಾದ್ವಿ. ಸಮಾನತೆ, ಪ್ರೀತಿ, ವಿಶ್ವಾಸ ಮತ್ತು ಗೌರವದ ಬದುಕನ್ನು ನಡೆಸಿದವರಾಗಿದ್ದಾರೆ. ಇಂತಹ ಶರಣರ ಬದುಕೇ ಒಂದು ಆದರ್ಶವಾಗಿದೆ ಎಂದರು.
ಕುಲಸಚಿವೆ ಪೆÇ್ರ. ಮೇಧಾವಿನಿ ಕಟ್ಟಿ ಮಾತನಾಡಿ ಶರಣ ಚಳುವಳಿಯಲ್ಲಿ ಸಮಾಜದ ಆರೋಗ್ಯವನ್ನು ಕಾಪಾಡಲು ಶ್ರಮಿಸಿದ ವಚನಕಾರರು ಸಮಾಜದ ಬದಲಾವಣೆಗೆ ಹೋರಾಡಿದರು. ಬುದ್ಧರಂತೆ ಬಸವಣ್ಣ, ಅಂಬಿಗರ ಚೌಡಯ್ಯ, ಜೇಡರ ದಾಸಿಮಯ್ಯ. ಹರಳ್ಳಯ್ಯ, ಚೆನ್ನಯ್ಯ, ಗಂಗಾಂಬಿಕೆ, ನೀಲಾಂಬಿಕೆ, ಅಕ್ಕಮಹಾದೇವಿ, ಹೇಮರಡ್ಡಿ ಮ್ಮಲ್ಲಮ್ಮ ಹೀಗೆ ಶರಣರು ಶರಣೆಯರು ಸಮಾನತೆಯ ಶಾಸ್ವತ ಸಮಾಜ ನಿರ್ಮಾಣ ಮಾಡುವಲ್ಲಿ ಅವಿರತ ಶ್ರಮಿಸಿದ್ದಾರೆ. ದೀನ ದಲಿತರು ಮತ್ತು ಸ್ರೀ ಸಮುದಾಯ ಮತ್ತು ದುರ್ಬಲರ ಬೆಳವಣಿಗೆಗೆ ಹೋರಾಡಿದರು. ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ ಎಂಬ ಸತ್ಯಸಾರವನ್ನು ಹಂಚುವ ಮೂಲಕ ವಚನ ಸಾಹಿತ್ಯ ಪರಂಪರೆಗೆ ಆಧುನಿಕತೆಯ ಸ್ಪರ್ಶ ನೀಡಿದರು. ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ವಚನಕಾರರ ಅಧ್ಯಯನ ಮತ್ತು ಸಂಶೋಧನೆಗೆ ಹೆಚ್ಚು ಆಧ್ಯತೆ ನೀಡಬೇಕಿದೆ. ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರು ಶರಣರ ವಚನದ ಸಾರದಂತೆ ಜೀವನ ಸಾಗಿಸಿ ಸ್ರೀವರ್ಗಕ್ಕೆ ಆದರ್ಶವಾಗಿದ್ದಾರೆ. ಚನ್ನಮಲ್ಲಿಕಾರ್ಜನನ ಅನುಯಾಯಿಯಾಗಿ ತಮ್ಮ ಜೀವನ ಮೌಲ್ಯಗಳ ಅತ್ಯುತ್ತಮ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ. ಇಂತಹ ಶರಣರ ಜೀವನ ಸಾಧನೆ ಸಮಾಜದ ಎಲ್ಲ ವರ್ಗಗಳಿಗೆ ತಲುಪಿಸಲು ಯೋಜಿತ ಕಾರ್ಯಕ್ರಮಗಳನ್ನು ಆಯೋಜಿಸುವುದು ಅಗತ್ಯವಿದೆ ಎಂದರು.
ಆಧುನಿಕ ಸಮಾಜದ ಪರಿವರ್ತನೆಗೆ ಸೂಕ್ತ ಚಿಕಿತ್ಸಕ ಅಂಶಗಳನ್ನು ತಮ್ಮ ವಚನಗಳ ಮೂಲಕ ಬಸವಣ್ಣನವರು ಕೊಡುಗೆಯಾಗಿ ನೀಡಿದ್ದಾರೆ. ಪ್ರತಿ ಕಾಲಕ್ಕೂ ಅನ್ವಯವಾಗುವ ಅವರ ವೈಚಾರಿಕ ಸಂದೇಶಗಳು ಮಾನವ ಸಮಾಜವನ್ನು ಜಾಗೃತಗೊಳಿಸುತ್ತವೆ. ಅಂತಹ ಶರಣರ ವಚನಗಳನ್ನು ಕೇವಲ ಜಯಂತಿ ಆಚರಣೆಗೆ ಸೀಮಿತವಾಗದೆ ಶರಣರ ಅಧ್ಯಯನ ಪೀಠಗಳು ಶರಣರ ಜೀವನ, ಚಿಂತನೆ ಮತ್ತು ಸುಧಾರಣೆಗಳನ್ನು ಕುರಿತು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಸಂಕಿರಣಗಳ ಆಯೋಜನೆಗೆ ಒತ್ತು ನೀಡಬೇಕು. ಆಗ ಮಾತ್ರ ಮನುಕುಲಕ್ಕೆ ಅವರ ಸಂದೇಶಗಳು ತಲುಪಿದಾಗ ಮಾತ್ರ ಪೀಠಗಳ ಉದ್ದೇಶಗಳು ಸಾರ್ಥಕವಾಗಲಿವೆ.