ಆನೂರ ಗ್ರಾಮದ ಶ್ರೀ ಆದಿ ಬಸವೇಶ್ವರ ಮಂದಿರ ಲೋಕಾರ್ಪಣೆ
ಅಫಜಲಪುರ:ಮೇ.11: ತಾಲೂಕಿನ ಆನೂರ ಗ್ರಾಮದಲ್ಲಿ ಶ್ರೀ ಆದಿ ಬಸವೇಶ್ವರ ಮಂದಿರ ಉದ್ಘಾಟನೆ, ನೂತನ ಮೂರ್ತಿ ಪ್ರತಿಷ್ಠಾಪನೆ, ನೂತನ ಕಳಸಾರೋಹಣ ಸಮಾರಂಭವು ವಿವಿಧ ಮಠಗಳ ಮಠಾಧೀಶರ ದಿವ್ಯ ಸಾನಿಧ್ಯದಲ್ಲಿ ಶುಕ್ರವಾರ ವಿವಿಧ ವಾದ್ಯ ಮೇಳಗಳೊಂದಿಗೆ ಸಂಭ್ರಮದಿಂದ ಅರ್ಥಪೂರ್ಣವಾಗಿ ಜರುಗಿತು.
ಕಾರ್ಯಕ್ರಮದ ಅಂಗವಾಗಿ ಮೇ. 6 ರಿಂದ 10 ರವರೆಗೆ ಪ್ರತಿದಿನ ರಾತ್ರಿ ಜೀವನ ದರ್ಶನ ಪ್ರವಚನ ಕಾರ್ಯಕ್ರಮವನ್ನು ಶಾಂತವೀರ ಶಿವಾಚಾರ್ಯರು, ಸಂಗೀತ ಸೇವೆಯನ್ನು ಕಲ್ಯಾಣಕುಮಾರ ಗಬಾಯಿಗಳು ಹಾಗೂ ತಬಲಾ ಸಾಥಿಯನ್ನು ಭೀಮಾಶಂಕರ ಗದಗ ನಡೆಸಿಕೊಟ್ಟರು.
ಧಾರ್ಮಿಕ ಸಭೆಯು ಬಡದಾಳ ತೇರಿನ ಮಠದ ಡಾ. ಚನ್ನಮಲ್ಲ ಶಿವಾಚಾರ್ಯರು, ಪೂಜ್ಯ ವಿಶ್ವಾರಾಧ್ಯ ಮಳೆಂದ್ರ ಶಿವಾಚಾರ್ಯರು, ಗದ್ದುಗೇಶ್ವರ ಮಲ್ಲಿಕಾರ್ಜುನ ಶಿವಾಚಾರ್ಯರು ಸೇರಿದಂತೆ ಅನೇಕ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಜರುಗಿತು.
ಇದೇ ವೇಳೆ ನೂತನ ಮಂದಿರ ಹಾಗೂ ನೂತನ ಮೂರ್ತಿ ದಾನಿಗಳಾದ ಪ್ರಥಮ ದರ್ಜೆ ಗುತ್ತಿಗೆದಾರ ಶಿವಾನಂದ ಸೀತನೂರ ದಂಪತಿಗಳಿಗೆ ಪೂಜ್ಯರು ಸನ್ಮಾನಿಸಿ ಅಭಿನಂದಿಸಿದರು.
ಮಂದಿರ ಉದ್ಘಾಟನೆ ಹಿನ್ನೆಲೆ ಪ್ರಥಮ ದರ್ಜೆ ಗುತ್ತಿಗೆದಾರ ಎಸ್. ಬಿ ಪಾಟೀಲ್ ಸೇರಿದಂತೆ ರಾಜಕೀಯ ಮುಖಂಡರು ಹಾಗೂ ಸುತ್ತಮುತ್ತಲ ಗ್ರಾಮದ ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.