ರೆಡ್‌ ಕ್ರಾಸ್‌ ನಡಿಗೆ ಮಾನವೀಯತೆ ಕಡೆಗೆ : ಕುಲಪತಿ ಅಗಸರ
ಕಲಬುರಗಿ:ಸೆ.22: ದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕಾಗಿದೆ. ನೆರೆ ರಾಷ್ಟ್ರಗಳ ಜೊತೆಗೆ ಶಾಂತಿಯ ಸಂಬಂಧ ಕಲ್ಪಿಸಬೇಕಾಗಿರುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಸೆ. 21 ರಂದು ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ಕಲಬುರಗಿ ಜಿಲ್ಲಾ ಶಾಖೆಯ ವತಿಯಿಂದ ರೆಡ್‌ ಕ್ರಾಸ್‌ ನಡಿಗೆ ಮಾನವೀಯತೆ ಕಡೆಗೆ ಎಂಬ ಘೋಷವಾಕ್ಯದೊಂದಿಗೆ ಜಾಥಾ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಗುಲಬರ್ಗಾ ವಿಶ್ವ ವಿದ್ಯಾಲಯ ಕಲಬುರಗಿಯ ಕುಲಪತಿಗಳಾದ ಪ್ರೊ. ದಯಾನಂದ ಅಗಸರ್‌ “ವಾಕಥಾನ್” ಉದ್ಘಾಟಿಸಿ ಮಾತನಾಡಿದರು.
ಈ ಸಮಾರಂಭದಲ್ಲಿ ಮಾತನಾಡಿದ ಕಲಬುರಗಿ ಜಿಲ್ಲಾ ರೆಡ್‌ ಕ್ರಾಸ್‌ ಸಂಸ್ಥೆಯ ನಿಕಟ ಪೂರ್ವ ಸಭಾಪತಿಗಳಾದ ಅಪ್ಪರಾವ ಅಕ್ಕೋಣೆ ಅವರು ಮಾತನಾಡಿ, ದೇಶದಲ್ಲಿ ಅಷ್ಟೇ ಅಲ್ಲ ಇಡೀ ವಿಶ್ವದಲ್ಲಿ ಶಾಂತಿ ನೆಲೆಸಬೇಕು. ಪ್ರತಿಯೊಬ್ಬರು ಸಹೋದರ ಭಾವ ಬೇಸುಗೆ ಆಗಬೇಕೆಂದು ಹೇಳಿದರು.
ವಾಕಥಾನ್‌ದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಯುವ ರೆಡ್‌ ಕ್ರಾಸ್‌ ನೋಡಲ್‌ ಅಧಿಕಾರಿ ಡಾ. ಬಸವರಾಜ ಸಣ್ಣಕ್ಕಿ, ರೆಡ್‌ ಕ್ರಾಸ್‌ ಜಿಲ್ಲಾ ಶಾಖೆಯ ಉಪ ಸಭಾಪತಿ ಭಾಗ್ಯಲಕ್ಷ್ಮೀ ಎಂ., ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ, ಖಜಾಂಚಿ ಜಿ. ಎಸ್. ಪದ್ಮಾಜಿ, ಜಿಲ್ಲಾ ಯುವ ರೆಡ್‌ ಕ್ರಾಸ್‌ ಸಂಚಾಲಕರು ಡಾ. ಪದ್ಮರಾಜ ರಾಸಣಗಿ, ಆಡಳಿತ ಮಂಡಳಿಯ ಸದಸ್ಯರಾದ ಸುರೇಶ ಬಡಿಗೇರ, ರಾಜೇ ಶಿವಶರಣಪ್ಪ, ವಿಶ್ವನಾಥ ಕೋರವಾರ, ಸಂಧ್ಯಾರಾಜ ಸಾಮ್ಯುವೆಲ್‌, ಡಾ. ಸೈಯದ್‌ ಸನಾವುಲ್ಲಾ, ಕಲ್ಯಾಣಕುಮಾರ ಶೀಲವಂತ, ಜೈಪ್ರಕಾಶ ಕಟ್ಟಿಮನಿ, ನೈನಾ ನವೀನ ಸೆಠೀಯಾ, ಸೈಯದ್‌ ನಿಜಾಮುದಿನ ಚಿಸ್ತಿ ಅಲ್ಲದೇ ಸುಮಾರು 25 ಕಾಲೇಜುಗಳಿಂದ 3000 ವಿದ್ಯಾರ್ಥಿಗಳು ಭಾಗವಹಿಸಿದರು. ವಾಕಥಾನ್‌ ನಡೆಗೆ ಜಗತ್‌ ವೃತ್ತದಿಂದ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ವೃತ್ತ, ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ನಡೆಸಲಾಯಿತು.