ಬೇರೆ ರಾಜ್ಯಗಳ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರಿ ಆಸ್ಪತ್ರೆಯ ಅಂಬ್ಯುಲೆನ್ಸ್ : ಕ್ರಮಕ್ಕೆ ಆಗ್ರಹ
ಬೀದರ್,ಸೆ.22-ಜಿಲ್ಲೆಯ ಔರಾದ್ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿರುವ ಅಂಬ್ಯುಲೆನ್ಸ್‍ಗಳನ್ನು ಬೇರೆ ರಾಜ್ಯಗಳ ಖಾಸಗಿ ಆಸ್ಪತ್ರೆಗಳಿಗೆ ಹಣ ಪಡೆದು ಕಳುಹಿಸಲಾಗುತ್ತಿದೆ ಎಂದು ಕರ್ನಾಟಕ ಪ್ರಜಾಶಕ್ತಿ ಸಮಿತಿ ಆರೋಪಿಸಿದೆ. ಈ ಸಂಬಂಧ ತನಿಖೆ ನಡೆಸಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಸಮಿತಿ ಜಿಲ್ಲಾ ಅಧ್ಯಕ್ಷ ಸಾಯಿ ಸಿಂಧೆ, ಉಪಾಧ್ಯಕ್ಷ ಮಹೇಂದ್ರಕುಮಾರ ಹೊಸಮನಿ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಆಶಾಕ ತ್ರಿಮುಖಿ, ಉಪಾಧ್ಯಕ್ಷ (ದ) ಧನರಾಜ ಮೇತ್ರೆ, ಯುವ ಮುಖಂಡರಾದ ವಿನೋದರಾಜ ಗೋಳೆ, ಉತ್ತಮ ಗಾಯಕವಾಡ, ಸತೀಶ ಮಡಿವಾಳ, ಅಮರದೀಪ ಸೂರ್ಯವಂಶಿ ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ದೂರು ಸಲ್ಲಿಸಿ, ಔರಾದ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ಸೇರಿಕೊಂಡು ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಅಂಬ್ಯುಲೆನ್ಸ್‍ಗಳನ್ನು ಬೇರೆ ರಾಜ್ಯಗಳ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಅಧಿಕಾರಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.