ತಿರುಪತಿ ತಿಮ್ಮಪ್ಪ ದೇವಸ್ಥಾನದ ಪಾವಿತ್ರ್ಯತೆ ಹಾಳು ಮಾಡಲು ಯತ್ನಿಸಿದವರಿಗೆ ಗಲ್ಲು ಶಿಕ್ಷೆ ವಿಧಿಸಿ: ಶಾಸಕ ಯತ್ನಾಳ
ವಿಜಯಪುರ,ಸೆ.22:ತಿರುಪತಿ ತಿಮ್ಮಪ್ಪ ದೇವಸ್ಥಾನದ ಪಾವಿತ್ರ್ಯತೆ ಹಾಳುಗೆಡವಲು ಯತ್ನಿಸಿದವರಿಗೆ ಗಲ್ಲು ಶಿಕ್ಷೆ ವಿಧಿಸುವಂತಾಗಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಈ ದೇಶದಲ್ಲಿ ಸನಾತನ ಧರ್ಮ ಪಾವಿತ್ರ್ಯತೆ ಕುಗ್ಗಿಸಲು ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು ಷಡ್ಯಂತ್ರ ನಡೆಸುತ್ತಿವೆ ಎಂದರು.
ಜಗನಮೋಹನ ರೆಡ್ಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದಿದ್ದಾರೆ. ಇವರು ಹಿಂದು ಹೆಸರು ಇಟ್ಟುಕೊಂಡಿದ್ದಾರೆ. ತಿರುಪತಿ ದೇವಸ್ಥಾನದ ಹಿಂದಿನ ಅಧ್ಯಕ್ಷ ಜಗನಮೋಹನ ರೆಡ್ಡಿ ಅವರ ಚಿಕ್ಕಪ್ಪನಾಗಿದ್ದರು. ಅವರೂ ಕ್ರಿಶ್ಚಿಯನ್ ಆಗಿದ್ದರು ಹಿಂದು ಧಾರ್ಮಿಕ ಸಂಸ್ಥೆಗಳಲ್ಲಿ ಹಿಂದುಗಳೇ ಅಧ್ಯಕ್ಷರಾಗಿರಬೇಕು. ಆಗ ಮಾತ್ರ ಹಿಂದು ದೇವಸ್ಥಾನಗಳ ಪಾವಿತ್ರ್ಯತೆ ಉಳಿಯುತ್ತದೆ ಎಂದು ಯತ್ನಾಳ ತಿಳಿಸಿದರು.
ಮುಜರಾಯಿ ಇಲಾಖೆ ರದ್ದುಪಡಿಸಿ ಹಿಂದುಗಳ ಆಡಳಿತ ಮಂಡಳಿ ರಚಿಸಬೇಕು. ಹಿಂದುಗಳ ಒಂದು ಟ್ರಸ್ಟ್ ರಚನೆಯಾಗಬೇಕು. ಟ್ರಸ್ಟ್‍ಗೆ ಬಂದ ಅನುದಾನ ದೇವಸ್ಥಾನದ ಕೆಲಸ, ಕಾರ್ಯಗಳಿಗೆ ವಿನಿಯೋಗವಾಗಬೇಕು ಎಂದು ಹೇಳಿದರು.