ಸಮಸಮಾಜದ ನಿರ್ಮಾಣಕ್ಕೆ ಬಸವಣ್ಣನವರ ಆದರ್ಶತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಿ- ಪದ್ಮಿನಿಸಾಹು
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.11-ಸಮ ಸಮಾಜದ ನಿರ್ಮಾಣಕ್ಕಾಗಿ ಬಸವಣ್ಣನವರ ಆದರ್ಶತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರುಸಲಹೆ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಹಮ್ಮಿಕೊಳ್ಳಲಾಗಿದ್ದ ಜಗಜ್ಯೋತಿ ಬಸವೇಶ್ವರರು ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾನತೆಯ ಸಮಾಜ ಸೃಷ್ಠಿಗೆ ಬಸವಣ್ಣನವರ ಕೊಡುಗೆ ಅಪಾರವಾಗಿದೆ. ಬಸವಣ್ಣನವರ ಸರಳ ಹಾಗೂ ಆದರ್ಶ ಜೀವನ ಇತರರಿಗೂ ಮಾದರಿಯಾಗಿದೆ. ಇಂದಿಗೂ ಪ್ರಸ್ತುತವಾಗಿರುವ ವಚನಗಳ ಮೂಲಕ ಸಮಾಜವನ್ನುತಿದ್ದಿದ ಬಸವಣ್ಣನವರ ಆದರ್ಶತತ್ವ ಸಿದ್ದಾಂತಗಳನ್ನು ನಮ್ಮೆಲ್ಲರ ಜೀವದಲ್ಲಿ ಅಳವಡಿಸಿಕೊಳ್ಳಲು ಎಲ್ಲರು ಪ್ರತಿಜ್ಞೆ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಮಾತನಾಡಿ ಸಮಸಮಾಜ ನಿರ್ಮಾಣದ ಕನಸು ಕಂಡು ಅದನ್ನು ನನಸು ಮಾಡಿದ ಬಸವಣ್ಣನವರು ಇಡೀ ವಿಶ್ವಕ್ಕೆ ಸಮಾನತೆಯ ಬೆಳಕು ನೀಡಿದರು. ಅಂದಿನ ಸಮಾಜದಲ್ಲಿದ್ದ ಸಾಮಾಜಿಕ ಅಸಮಾನತೆ, ಮೌಢ್ಯತೆ, ಅಸ್ಪøಶ್ಯತೆ, ಕಂದಾಚಾರಗಳನ್ನು ತೊಡೆದುಹಾಕಲು ಅವಿರತವಾಗಿ ಶ್ರಮಿಸಿದ ಬಸವಣ್ಣನವರು ದೌರ್ಜನ್ಯ, ಅಪಮಾನಗಳನ್ನು ಅನುಭವಿಸಿದ್ದ ಜನರಿಗೆ ದಾರಿದೀಪವಾದರು. ಸಮಾನತೆಯ ಮೂಲಕ ಜ್ಞಾನದ ದೀಪ ಹಚ್ಚಿದರು ಎಂದರು.
ಬಸವಣ್ಣನವರು ಯಾವುದೇ ಆಸೆ, ಅಮಿಷಗಳಿಗೆ ಒಳಗಾಗದೇ ಸರಳ ಜೀವನವನ್ನು ಅನುಸರಿಸಿದರು. ಪ್ರತಿಯೊಬ್ಬರಿಗೂ ಕಾಯಕದ ಮಹತ್ವದ ಬಗ್ಗೆ ಅರಿವು ಮೂಡಿಸಿದರು. ಅನುಭವ ಮಂಟಪದಲ್ಲಿ ಪುರುಷರಿಗೆ ಸರಿಸಮಾನವಾಗಿ ವಚನಗಳನ್ನು ರಚಿಸಲು ಮಹಿಳೆಯರಿಗೂ ಅವಕಾಶ ಮಾಡಿಕೊಟ್ಟರು. ಸರ್ವಕಾಲಕ್ಕೂ ಪ್ರಚಲಿತವಾಗುವಂತಹ ವಚನಗಳನ್ನು ರಚಿಸಿದ ಬಸವಣ್ಣನವರು ತ್ರಿವಿಧದಾ ಸೋಹಿ ತತ್ವ ಇಂದಿಗೂ ಮಾದರಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.
ಬಸವಣ್ಣನವರು ಸಾಮಾಜಿಕ ಪರಿವರ್ತನೆಯ ಹರಿಕಾರರು ಹೌದು. ಕಳಬೇಡ, ಕೊಲಬೇಡ, ಹುಸಿಯ ನುಡಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ಇದಿರ ನಿಂದಿಸಬೇಡ, ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ, ಬಸವಣ್ಣನವರ ಈ ವಚನಗಳ ಸಾರವನ್ನು ಶಾಲಾ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಹೇಳಿಕೊಡಬೇಕು ಎಂದ ಹೆಚ್ಚುವರಿ ಜಿಲ್ಲಾಧಿಕಾರಿಯವರು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರು ಕೌಟುಂಬಿಕ ಜೀವನದೊಂದಿಗೆ ಬಸವಣ್ಣನವರ ಕಾಯಕ, ಆಧ್ಯಾತ್ಮ ಜೀವನವನ್ನು ಬದುಕಿನುದ್ದಕ್ಕೂ ರೂಪಿಸಿಕೊಂಡು ಶರಣರಿಗೆ ಆದರ್ಶ ಪ್ರಾಯರಾಗಿದ್ದಾರೆ ಎಂದರು.
ಮುಖಂಡರಾದ ಕಾಳನಹುಂಡಿ ಗುರುಸ್ವಾಮಿ ಅವರು ಬಸವಣ್ಣನವರು ಹಾಗೂ ಅವರ ವಚನಗಳ ಪ್ರಾಮುಖ್ಯತೆ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದ ಮುಖಂಡರಾದ ಮೂಡ್ಲುಪುರ ನಂದೀಶ್, ಮರಿಸ್ವಾಮಿ, ನಾಗೇಂದ್ರ, ಪ್ರವೀಣ್, ಬಿ.ಕೆ. ರವಿಕುಮಾರ್, ಆಲೂರುಮಲ್ಲು, ಆಲೂರು ನಾಗೇಂದ್ರ, ಸಿ.ಎಂ. ಕೃಷ್ಣಮೂರ್ತಿ, ರತ್ನಮ್ಮ ಬಸವರಾಜು ಇತರರು ಕಾರ್ಯಕ್ರಮದಲ್ಲಿ ಇದ್ದರು.