ವೈಚಾರಿಕತೆಯ ಜೀವನ ನಮ್ಮದಾಗಲಿ
ಕಲಬುರಗಿ:ಮೇ.10: ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಬೆಳವಣಿಗೆ ಆಗಿದ್ದರೂ ಕೂಡಾ, ಇಂದಿಗೂ ಅನೇಕ ಮೂಡsÀನಂಬಿಕೆ ಕಂಡು ಬರುತ್ತಿರುವುದು ತುಂಬಾ ವಿಷಾದನೀಯ ಸಂಗತಿಯಾಗಿದೆ. ಪ್ರತಿಯೊಬ್ಬರು ಮೂಢನಂಬಿಕೆಯಿಂದ ಹೊರಬಂದು, ವೈಜ್ಞಾನಿಕ, ವೈಚಾರಿಕವಾದ ಮನೋಭಾವನೆಯನ್ನು ಬೆಳಸಿಕೊಳ್ಳಬೇಕಾದದ್ದು ತುಂಬಾ ಅಗತ್ಯವಾಗಿದೆ ಎಂದು ಹಿರಿಯ ಸಾಹಿತಿ, ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಎಚ್ ಆಶಯ ವ್ಯಕ್ತಪಡಿಸಿದರು.
ನಗರದ ರಾಣೇಸ್ಪಿರ್ ದರ್ಗಾ ರಸ್ತೆಯಲ್ಲಿರುವ ‘ನೆಮ್ಮದಿ ಹಿರಿಯರ ಮನೆ(ವೃದ್ಧಾಶ್ರಮ)’ದಲ್ಲಿ 891ನೇ ಬಸವ ಜಯಂತಿ ಪ್ರಯುಕ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’ದಿಂದ ಶುಕ್ರವಾರ ಏರ್ಪಡಿಸಲಾಗಿದ್ದ ವಿಧವೆಯರಿಗೆ ವಿಶೇ ಸತ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಮಾನವ ಸಂಘ ಜೀವಿ. ಅವನ ಬದುಕಿನಲ್ಲಿ ಪರಿಸರ ಮತ್ತು ಅನೇಕ ವ್ಯಕ್ತಿಗಳ ಜೊತೆ ಸಂಬಂಧ ಹೊಂದಬೇಕಾದದ್ದು ಅಗತ್ಯವಾಗಿದೆ. ಅವನು ಕೆಲವು ನಂಬಿಕೆಗಳ ಮೇಲೆ ಜೀವನವನ್ನು ಸಾಗಿಸಬೇಕಾಗುತ್ತದೆ. ನಂಬಿಕೆಯಲ್ಲಿ ಸತ್ಯ, ವೈಜ್ಞಾನಿಕವಾಗಿದ್ದರೆ ಒಳ್ಳೆಯದು, ಆದರೆ ಕಂದಾಚಾರ, ಅಂದಶೃದ್ಧೆ, ಅವೈಜ್ಞಾನಿಕವಾದ ಮತ್ತು ಯಾವುದೇ ಆಧಾರ ರಹಿತವಾದ ನಂಬಿಕೆಗಳು ಮೂಢ ನಂಬಿಕೆಗಳಾಗುತ್ತವೆ. ನಂಬಿಕೆ ಇರಬೇಕೆ ವಿನಃ, ಮೂಡ ನಂಬಿಕೆಗಳಿರಬಾರದೆಂದರು.
ಸಮಾಜ ಸೇವಕ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ಮೌಢ್ಯತೆ, ಕಂದಾಚಾರ, ಅಂಧಶೃದ್ಧೆ ನಿರ್ಮೂಲನೆಗೆ ಬಸವಾದಿ ಶರಣರು ಶ್ರಮಿಸಿದ್ದಾರೆ. ಮಹಿಳೆಯರಿಗೆ ಪೂಜ್ಯನೀಯ ಸ್ಥಾನವನ್ನು ಶರಣರು ನೀಡಿದ್ದಾರೆ. ವಿಧವೆಯರ ಬಗ್ಗೆ ಸಮಾಜ ನೋಡುವ ದೃಷ್ಠಿಕೋನ ಬದಲಾಗಬೇಕು. ಬಸವ ಜಯಂತಿ ಪ್ರಯುಕ್ತ ಬಳಗವು ಅಮೋಘವಾದ ಕಾರ್ಯವನ್ನು ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ಮಹಾಂತೇಶ, ವೃದ್ಧಾಶ್ರಮದ ವ್ಯವಸ್ಥಾಪಕಿ ಬಸಮ್ಮ ಕೆ.ಸ್ಥಾವರಮಠ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.