ಜನ, ಜಾನುವಾರುಗಳ ಕುಡಿಯುವ ನೀರಿಗಾಗಿ ಕೆರೆಗೆ ನೀರು: ಸಚಿವ ಎಂ.ಬಿ ಪಾಟೀಲ
ವಿಜಯಪುರ,ಮೇ.10:ಬಿರು ಬೇಸಿಗೆಯಲ್ಲಿ ತತ್ತರಿಸಿದ ಜನ- ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಆಲಮಟ್ಟಿ ಜಲಾಶದಿಂದ ಮುಳವಾಡ ಏತ ನೀರಾವರಿ ಹಾಗೂ ಚಿಮ್ಮಲಗಿ ಏತ ನೀರಾವರಿ ಯೋಜನೆಯಡಿ ಇಂದಿನಿಂದ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಕೈಗಾರಿಕೆ, ಮೂಲಸೌಲಭ್ಯಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿಜಯಪುರ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವದನ್ನು ತಪ್ಪಿಸಲು ಈ ಹಿಂದೆ ತಿಡಗುಂದಿ ಕಾಲುವೆಯಿಂದ ನೀರು ಹರಿಸಿ, ಭೂತನಾಳ ಕೆರೆ ತುಂಬಿಸಿ, ನಗರದಲ್ಲಿ ಸಮಪರ್ಕವಾಗಿ ಕುಡಿಯುವ ನೀರು ಪೂರೈಸಲಾಗಿತ್ತು. ಈಗ ಮತ್ತೆ ಭೂತನಾಳ ಕೆರೆಗೆ ಹಾಗೂ ಇಚಿಡಿ ತಾಲೂಕಿನ ಹೊರ್ತಿ ಮತ್ತು ಇತರೆ 31 ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಯಡಿ ತಿಡಗುಂದಿ ಕಾಲುವೆ ಮೂಲಕ ನೀರು ಹರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಬಸವನ ಬಾಗೇವಾಡಿ ತಾಲೂಕಿನ ಅರೇಶಂಕರ ಮತ್ತು ಇತರೆ 19 ಗ್ರಾಮಗಳ ಕಣಕಾಲ ಮತ್ತು 11 ಗ್ರಾಮಗಳ ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಯು 0.45ಟಿ.ಎಂ.ಸಿ ನೀರನ್ನು ಮುಳವಾಡ ಏತ ನೀರಾವರಿ ಹಾಗೂ ಚಿಮ್ಮಲಗಿ ಏತ ನೀರಾವರಿ ಯೋಜನೆಯಡಿ ಕೆರೆಗಳಿಗೆ ಹರಿಸುವಂತೆ ಕೋರಲಾಗಿತ್ತು. ಇದಕ್ಕೆ ಸ್ಪಂದಿಸಿದ ಬೆಳಗಾವಿ ಪ್ರಾದೇಶಿಕ ಆಯುಕ್ತರು ಮೇ 28 ರವರೆಗೆ 2 ಟಿ.ಎಂ.ಸಿ ನೀರು ಕೆರೆಗಳಿಗೆ ಹರಿಯಲಿದೆ ಎಂದರು.
ಭೀಕರ ಬರ ಹಾಗೂ ಬೇಸಿಗೆ ಇರುವದರಿಂದ ಕುಡಿಯುವ ನೀರು ಒದಗಿಸಲು ಕಾಲುವೆಗಳಿಗೆ ನೀರು ಹರಿಸುವಂತೆ ಒಂದು ತಿಂಗಳಿನಿಂದ ನಿರಂತರವಾಗಿ ಜಿಲ್ಲಾಧಿಕಾರಿಗಳ ಮೂಲಕ ಕೋರಿದ್ದೆನು. ನೀತಿ ಸಂಹಿತೆ ಕಾರಣ ಚುನಾವಣೆ ಆಯೋಗದ ಅನುಮತಿ ಪಡೆದು, ಕಾಲುವೆ ಮೂಲಕ ನೀರು ಹರಿಸಲು ಇದೀಗ ಆದೇಶ ನೀಡಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.