ಬಸವ ಜಯಂತಿ; ಆಚರಣೆಗಿಂತ ವಿಚಾರ ಪಾಲಿಸಿರಿ
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.10: ಬಸವಣ್ಣನವರು ರಾಜನೀತಿಜ್ಞರಾಗಿ ಮತ್ತು ಸಮಾಜ ಸುಧಾರಕರಾಗಿ ತಮ್ಮ ಕಾವ್ಯ ಮತ್ತು ಬರವಣಿಗೆಯ ಮೂಲಕ ಸಾರ್ವಜನಿಕರಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಅವಿರತವಾಗಿ ಶ್ರಮಿಸಿದರು. ಹೀಗಾಗಿ ಅವರ ಜಯಂತಿ ಆಚರಣೆಗಿಂತ ಅವರ ವಿಚಾರಧಾರೆಗಳನ್ನು ಪಾಲಿಸಬೇಕು ಎಂದು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ತಿಪ್ಪೇರುದ್ರಪ್ಪ ಜೆ ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರರ 891ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಚನ ಸಾಹಿತ್ಯದ ಮೂಲಕ ಲಿಂಗ ಸಮಾನತೆ, ಅಸ್ಪ್ರಶ್ಯತೆ ನಿವಾರಣೆ ವಿರುದ್ಧ ಹೋರಾಡಲು ತಮ್ಮ ವೈಚಾರಿಕತೆ ಮೂಲಕ ಜನರಲ್ಲಿ ಅರಿವು ಮೂಡಿಸಲು ಮುಂದಾಗಿದ್ದರು. ಶರಣರು ಕೇವಲ ಮಾತಿನ ಮಲ್ಲರಾಗಿರದೇ ನಡೆ ಧೀರರಾಗಿದ್ದರು. ಮೊದಲು ನಡೆದು ನಂತರ ನುಡಿಯುವುದು ಅವರ ಜೀವನಾದರ್ಶನವಾಗಿತ್ತು. ಅವರ ತತ್ವಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಬಾಳಬೇಕು ಎಂದು ಹೇಳಿದರು.
ಕಾಯಕ, ದಾಸೋಹ ತತ್ವಗಳ ಮೂಲಕ ಸಮಾನತೆಯನ್ನು ಸಾರುತ್ತಾ, ಸಕಲಜೀವರಾಶಿಗಳಿಗೂ ಲೇಸನ್ನು ಬಯಸಿದ ಮಹಾನ್ ಮಾನವತಾವಾದಿ ಅಣ್ಣ ಬಸವಣ್ಣನವರ ವಚನಗಳ ತತ್ವ, ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ವಿವಿಯ ಕುಲಸಚಿವರು (ಮೌಲ್ಯಮಾಪನ) ಪ್ರೊ. ರಮೇಶ್ ಓಲೇಕಾರ್ ಹೇಳಿದರು.
ಬಸವ ಜಯಂತಿ ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಲ್ಲ, ಬದಲಾಗಿ ಎಲ್ಲ ಸಮುದಾಯಗಳ ಒಳಿತಿಗಾಗಿ ಹೋರಾಟ ನಡೆಸಿದ ಮಹಾನ್ ಚೇತನ. ಹೀಗಾಗಿ ಎಲ್ಲ ಸಮುದಾಯದವರು ಜಯಂತಿ ಆಚರಿಸಬೇಕೆಂದು ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಅರುಣ್ ಕುಮಾರ್ ಲಗಶೆಟ್ಟಿ ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಸಂಯೋಜಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.