ಬಾಗಲಕೋಟೆ ಜಿಲ್ಲೆಗೆ ಶೇ.77.92 ರಷ್ಟು ಎಸ್.ಎಸ್.ಎಲ್.ಸಿ ಫಲಿತಾಂಶ
ಬಾಗಲಕೋಟೆ, ಮೇ 10 : 2024ರ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲತಾಂಶ ಗುರುವಾರ ಪ್ರಕಟವಾಗಿದ್ದು, ಬಾಗಲಕೋಟೆ ಜಿಲ್ಲೆ ಶೇ.77.92 ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ 13ನೇ ಸ್ಥಾನ ಪಡೆದುಕೊಂಡಿದೆ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 14954 ಬಾಲಕರು ಮತ್ತು 15492 ಬಾಲಕಿಯರು ಸೇರಿ ಒಟ್ಟು 30446 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 11044 ಬಾಲಕರು, 13415 ಬಾಲಕಿಯರು ಸೇರಿ ಒಟ್ಟು 24459 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಈ ಬಾರಿಯು ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಬಾಲಕರು ಶೇ.73.85 ರಷ್ಟು ತೇರ್ಗಡೆ ಹೊಂದಿದರೆ, ಬಾಲಕಿಯರು ಶೇ.86.59 ರಷ್ಟು ತೇರ್ಗಡೆ ಹೊಂದಿರುತ್ತಾರೆ. ಕಳೆದ 2022-23ನೇ ಸಾಲಿನಲ್ಲಿ ಶೇ.84.21 ಫಲಿತಾಂಶ ಪಡೆಯುವ ಮೂಲಕ 27ನೇ ಸ್ಥಾನ ಪಡೆದುಕೊಂಡರೆ, 2023-24ನೇ ಸಾಲಿನಲ್ಲಿ ಶೇ.77.92 ರಷ್ಟು ಫಲಿತಾಂಶ ಪಡೆಯುವ ಮೂಲಕ 13ನೇ ಸ್ಥಾನ ಪಡೆದುಕೊಂಡಿದೆ. ಶೇಖಡಾವಾರು ಫಲಿತಾಂಶದಲ್ಲಿ ಕಳೆದ ಸಾಲಿನಿಂದ ಈ ಸಾಲಿಗೆ ಹೋಲಿಸಿದರೆ ಕಡಿಮೆ ಇದ್ದರೂ ಸ್ಥಾನದಲ್ಲಿ ಉತ್ತಮ ಸಾಧನೆ ಮಾಡಲಾಗಿದೆ.
625ಕ್ಕೆ 625 ಅಂಕ ಪಡೆದ ಮುಧೋಳ ತಾಲೂಕಿನ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಅಂಕಿತಾ ಬಸಪ್ಪ ಕೊಣ್ಣೂರ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಅಂಕಿತಾ ರಾಜ್ಯಕ್ಕೂ ಜಿಲ್ಲೆಗೂ ಪ್ರಥಮ ಸ್ಥಾನ ಪಡೆದುಕೊಂಡರೆ, 625ಕ್ಕೆ 622 ಅಂಕ ಪಡೆದ ಮುಧೋಳನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಶೃತಿ ಹಂಚಾಟೆ, ಗುಳೇದಗುಡ್ಡ ಸರಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿ ಮಿನಾಜ ಕುರುಡಗಿ ಜಿಲ್ಲೆಗೆ ದ್ವಿತೀಯ ಸ್ಥಾನ, ಬಾಗಲಕೋಟೆ ಎಸ್.ಸಿ, ಎಸ್‍ಟಿ ಪ್ರತಿಭಾನ್ವಿತ ಶಾಲೆಯ ವಿದ್ಯಾರ್ಥಿ ದೀಪಾ ಕೊಕಟನೂರ ತೃತಿಯ ಸ್ಥಾನ ಪಡೆದುಕೊಂಡಿದ್ದಾರೆ.
ಬಾದಾಮಿ ತಾಲೂಕಿನಲ್ಲಿ 5237 ಪೈಕಿ 4194 (ಶೇ.80.08) ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರೆ, ಬಾಗಲಕೋಟೆ ತಾಲೂಕಿನಲ್ಲಿ 4556 ಪೈಕಿ 3620 (ಶೇ.79.46), ಬೀಳಗಿ ತಾಲೂಕಿನಲ್ಲಿ 2783 ಪೈಕಿ 1893 (ಶೇ.68.02), ಹುನಗುಂದ ತಾಲೂಕಿನಲ್ಲಿ 5085 ಪೈಕಿ 4108 (ಶೇ.80.79), ಜಮಖಂಡಿ ತಾಲೂಕಿನಲ್ಲಿ 7725 ಪೈಕಿ 6440 (ಶೇ.83.37) ಹಾಗೂ ಮುಧೋಳ ತಾಲೂಕಿನಲ್ಲಿ 5060 ಪೈಕಿ 4204 (ಶೇ.83.08) ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ ಎಂದು ಬಿ.ಕೆ.ನಂದನೂರ ತಿಳಿಸಿದ್ದಾರೆ.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಪಡೆದುಕೊಂಡ ಅಂಕಿತಾ ಕೊಣ್ಣೂರ ಅವರನ್ನು ಜಿಲ್ಲಾಡಳಿತ, ಜಿ.ಪಂ ವತಿಯಿಂದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಮರಟ್ಟಿ ಸನ್ಮಾನಿಸಿದರು.