ಸಸಿ ನೆಟ್ಟು ಪರಿಸರ ಸಂರಕ್ಷಣೆಗೆ ಮುಂದಾಗಿ
ಹೊಸಕೋಟೆ.ಮೇ.೧೦- ಗಿಡಗಳನ್ನು ನೆಟ್ಟು ಬೆಳಸಿದರೆ ಸಾಕಾಗುವುದಿಲ್ಲ ಅದನ್ನು ಸರಿಯಾದ ರೀತಿಯಲ್ಲಿ ಪೋಷಿಸಬೇಕು, ಇರುವ ಮರಗಳನ್ನು ಕಡಿಯದೇ ಉಳಿಸಿ ಬೆಳೆಸಬೇಕು. ಅಭಿವೃದ್ಧಿ ಹೆಸರಿನಲ್ಲಿ ಹೆಚ್ಚಾಗಿ ಮರಗಳನ್ನು ಕಡೆಯಲಾಗುತ್ತಿದೆ. ಶುದ್ಧ ಗಾಳಿ, ನೆರಳು ನೀಡುವ ಪರಿಸರದಲ್ಲಿ ಶ್ವಾಸಕೋಶದಂತೆ ವರ್ತಿಸುವ ವೃಕ್ಷಗಳು ನಮಗೆ ಅಗತ್ಯವಾಗಿದೆ ಎಂದು ಶ್ರೀ ಭದ್ರಕಾಳಿ ಶಕ್ತಿ ಪೀಠದ ಸಂಸ್ಥಾಪಕ ಅರ್ಚಕರಾದ ಶ್ರೀ ಕೆ.ಬಿ. ನಾಗರಾಜಶಾಸ್ತ್ರಿಗಳು ಹೇಳಿದರು.
ಹೊಸಕೋಟೆ ತಾಲೂಕಿನ ಕಾಳಪ್ಪನಹಳ್ಳಿ ಗ್ರಾಮದ ಶ್ರೀ ಭದ್ರಕಾಳಿ ಶಕ್ತಿ ಪೀಠದಲ್ಲಿ ಅಮಾವಾಸ್ಯೆ ವಿಶೇಷ ಪೂಜಾ ಕಾರ್‍ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಕಾರ್‍ಯಕ್ರಮ ಹಾಗೂ ಸಸಿ ನೆಡುವ ಕಾರ್‍ಯಕ್ರಮದ ಮೂಲಕ ಮಾತನಾಡಿದ ಅವರು, ರ್ಶರೀ ಭದ್ರಕಾಳಿ ಶಕ್ತಿ ಪೀಠದಲ್ಲಿ ಒಂದೇ ಸ್ಥಳದಲ್ಲಿ ಶಿವ ಮತ್ತು ಶಕ್ತಿ ಇರುವ ಕಾರಣ ಅನೇಕ ಜನರ ಕಷ್ಟ ನಿವಾರಣೆಯಾಗುತ್ತಾ ಬಂದಿದ್ದು ಇಲ್ಲಿಗೆ ಬರುವ ಭಕ್ತರು ದಿನೇ ದಿನೇ ಹೆಚ್ಚಾಗುತ್ತಿದ್ದಾರೆ. ಇದೇ ರೀತಿ ಇಲ್ಲಿಗೆ ಬರುವ ಭಕ್ತರು ದೇವರಲ್ಲಿ ನಂಬಿಕೆ ಇಟ್ಟು ತಮ್ಮ ದೈನಂದಿನ ಕೆಲಸ ಕಾರ್‍ಯಗಳಲ್ಲಿ ತೊಡಗಿಕೊಂಡರೆ ಎಲ್ಲಾ ರೀತಿಯಿಂದ ಒಳಿತಾಗುತ್ತದೆ ಎಂಬ ನಂಬಿಕೆ ಎಲ್ಲರದ್ದು ಎಂದರು.
ಇನ್ನು ಈಗ ಎಲ್ಲೆಡೆ ಹುಟ್ಟು ಹಬ್ಬ ಅಥವಾ ಯಾವುದೇ ರೀತಿಯ ಸಂಬ್ರಮ ಸಡಗಡ ಬಂದರೆ ಹಣ ಖರ್ಚು ಮಾಡಿ ಮೋಜು ಮಸ್ತಿ ಮಾಡಿ ಸಮಾಜಕ್ಕೆ ಮಾರಕವಾಗುತ್ತಾರೆ. ಆದರೆ ಇದನ್ನೆಲ್ಲಾ ಬದಿಗೊತ್ತಿ ತಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಸಮಾಜದಲ್ಲಿರುವ ಬಡವರಿಗೆ ಅನಾಥ ಆಶ್ರಮಗಳಿಗೆ ಅನ್ನದಾಸೋಹದ ವ್ಯವಸ್ಥೆ ಕಲ್ಪಿಸಬೇಕು. ಅನ್ನದಾನ ಮಾಡಿ ಬಡವರಿಗೆ ತಮ್ಮ ಕೈಲಾದ ಸಹಾಯ ಮಾಡುವ ಜೊತೆಗೆ ಸಮಾಜಕ್ಕೆ ಮಾದರಿಯಾಗಬೇಕು. ಒಂದು ಸಸಿ ನೆಟ್ಟರೆ ಅದು ಮುಂದಿನ ನಮ್ಮ ಪೀಳಿಗೆಗೆ ಸಹ ನೆರಳು ಕೊಡುತ್ತದೆ. ಅದೇ ಮನುಷ್ಯನಿಗೆ ಕೆಲವೊಮ್ಮೆ ದ್ವೇಷ ಅಸೂಯೆ ಬಂದರೆ ತಮ್ಮ ತಮ್ಮಲ್ಲೇ ಜಗಳ ಮೂಡಿ ಸಂಬಂಧಗಳೇ ಕಳೆದುಹೋಗುತ್ತದೆ. ಆದರೆ ಸಸಿಗಳು ನೆಟ್ಟು ಮರವಾಗಿ ಬೆಳೆದರು ಅವುಗಳನ್ನು ಕಡಿದರು ಸಹ ಅವು ನಮಗೆ ನೆರಳು ನೀಡುವುದನ್ನು ನಿಲ್ಲಿಸುವುದಿಲ್ಲ. ಸಸಿಗಳನ್ನು ನೆಟ್ಟು ಎಲ್ಲರೂ ಪರಿಸರ ಸಂರಕ್ಷಣೆ ಮಾಡಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ದೇವಾಳಯದ ಅರ್ಚಕರಾದ ಬಸವರಾಜಾರಾಧ್ಯ, ಮಹೇಶ್, ವಿನಯ್ ಹಾಗೂ ಹೆಚ್ಚಿನ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.