ಎಸ್‍ಎಸ್‍ಎಲ್‍ಸಿ ಪರೀಕ್ಷೆ: ಪವಿತ್ರಾ ಜಿಲ್ಲೆಗೆ ಟಾಪರ್
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ,10: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯ ಪವಿತ್ರಾ ಮಡಿವಾಳಪ್ಪಗೌಡ ಕೊಣ್ಣೂರ 623 ಅಂಕ ಪಡೆಯುವ ಮೂಲಕ ಜಿಲ್ಲೆಗೆ ಟಾಪರ್ ಆಗಿದ್ದಾರೆ.
ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆದು ವೈದ್ಯೆಯಾಗಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಶ್ರಮಿಸುವೆ ಎಂದು ಪವಿತ್ರಾ ಅವರು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.
ಮುದ್ದೇಬಿಹಾಳ ತಾಲೂಕಿನ ಬಿದರಕುಂದಿಯ ಸರ್ಕಾರಿ ಆದರ್ಶ ಮಹಾವಿದ್ಯಾಲಯದಲ್ಲಿ 10 ನೇ ತರಗತಿ ಅಧ್ಯಯನ ಮಾಡಿರುವ ಪವಿತ್ರಾ ವಿಜ್ಞಾನ, ಆಂಗ್ಲ ವಿಷಯದಲ್ಲಿ 99 ಅಂಕ ಹಾಗೂ ಉಳಿದ ಎಲ್ಲ ವಿಷಯಗಳಲ್ಲಿಯೂ ನೂರಕ್ಕೆ 100 ಅಂಕ ಪಡೆದು ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ 21 ನೇ ರ್ಯಾಂಕ್ ಪಡೆಯುವ ಮೂಲಕ ಅಮೋಘ ಸಾಧನೆಗೆ ಪಾತ್ರರಾಗಿದ್ದಾರೆ. ಪವಿತ್ರಾ ಅವರ ತಂದೆ ಕೆಎಸ್‍ಆರ್‍ಟಿಸಿ ಬಸ್ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟಗೊಂಡು ಅದ್ವಿತೀಯ ಸಾಧನೆ ಮಾಡಿರುವುದು ತಿಳಿಯುತ್ತಿದ್ದಂತೆ ಪವಿತ್ರಾ ಮನೆಯಲ್ಲಿ ಸಂತೋಷ ಮನೆ ಮಾಡಿತ್ತು. ಪಾಲಕರು, ಸ್ನೇಹಿತರು, ಬಂಧು- ಬಾಂಧವರು ಮನೆಗೆ ಆಗಮಿಸಿ ಶುಭ ಕೋರಿ ಸಿಹಿ ತಿನಿಸಿದರು. ನಂತರ ವಿದ್ಯಾರ್ಥಿನಿ ಪವಿತ್ರಾ ತಾನು ಕಲಿತ ಶಾಲೆಗೆ ಭೇಟಿ ನೀಡಿ ವಿದ್ಯೆ ಕರುಣಿಸಿದ ಗುರುಗಳ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು, ವಿದ್ಯಾರ್ಥಿನಿಯ ಅಭೂತಪೂರ್ವ ಸಾಧನೆ ಮೆಚ್ಚಿ ಶಿಕ್ಷಕ ವೃಂದ ವಿದ್ಯಾರ್ಥಿನಿಗೆ ಪುಸ್ತಕ ನೀಡಿ, ಸಿಹಿ ತಿನಿಸಿ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಶಿಕ್ಷಣ ಸಂಸ್ಥೆಯಲ್ಲಿ ಸನ್ಮಾನ ಸ್ವೀಕರಿಸಿದ ಪವಿತ್ರಾ ಅವರು, ಪರಿಶ್ರಮ, ಅಧ್ಯಯನ ಕ್ರಮ, ಶಿಕ್ಷಕರು ಹಾಗೂ ಪೋಷಕರ ಪೆÇ್ರೀತ್ಸಾಹದ ಕುರಿತು ಹೆಮ್ಮೆಯಿಂದ ಹೇಳಿಕೊಂಡರು.
ಪರೀಕ್ಷೆಯ ತಯಾರಿ ಕುರಿತು ವಿವರಿಸಿದ ಪವಿತ್ರಾ, ಪರೀಕ್ಷೆ ಎಂದರೆ ಭಯಬೇಡ, ಕಠಿಣ ಪರಿಶ್ರಮಕ್ಕಿಂತ ವ್ಯವಸ್ಥಿತ ಅಧ್ಯಯನ ಕ್ರಮ ರೂಢಿಸಿಕೊಳ್ಳುವುದು ಒಳಿತು, ವ್ಯವಸ್ಥಿತ ಅಧ್ಯಯನ ಕ್ರಮ ರೂಢಿಸಿಕೊಂಡರೆ ಒತ್ತಡ ಇರುವುದಿಲ್ಲ, ಒತ್ತಡ ಇರದಿದ್ದರೆ ಸುಲಭವಾಗಿ, ಉತ್ಸಾಹದಿಂದ ಪರೀಕ್ಷೆ ಬರೆಯಬಹುದು, ಅಂದಿನ ಅಭ್ಯಾಸವನ್ನು ಅಂದೇ ಓದಿ ಮನನ ಮಾಡಿಕೊಳ್ಳಬೇಕು, ನಾಳೆ ಓದಿದರಾಯಿತು ಎಂದರೆ ಸಲ್ಲದು, ಪರೀಕ್ಷೆ ಹಿಂದಿನ ಕೆಲವು ದಿನ ಓದಲು ಆರಂಭಿಸಿದರೆ ಒತ್ತಡ ಹಾಗೂ ಗೊಂದಲ ಉಂಟಾಗುತ್ತದೆ, ಹೀಗಾಗಿ ಶಿಕ್ಷಕರು ಹೇಳಿದ ಪಾಠವನ್ನು ಅಂದೇ ಓದಿ ಕರಗತ ಮಾಡಿಕೊಳ್ಳಬೇಕು, ಪರೀಕ್ಷೆ ಸಮೀಪಿಸಿದಾಗ ಮನನ ಮಾಡಿಕೊಂಡರೆ ಉತ್ತಮ.
ಯಾವುದೇ ವಿಷಯದಲ್ಲಿ ಗೊಂದಲ ಉಂಟಾದರೆ ಶಿಕ್ಷಕರಿಗೆ ಸಂಪರ್ಕ ಮಾಡಿ ಗೊಂದಲ ಪರಿಹರಿಸಿಕೊಳ್ಳಿ, ನಾನು ಸಹ ಶಿಕ್ಷಕರನ್ನು ಸಂಪರ್ಕಿಸಿ ಆಗಿರುವ ಗೊಂದಲಗಳನ್ನು ಪರಿಹರಿಸಿಕೊಳ್ಳುತ್ತಿದೆ, ಶಿಕ್ಷಕರು ಹೇಳುವ ಪಾಠವನ್ನು ನಾವು ಮನಪೂರ್ವಕವಾಗಿ ಕೇಳಬೇಕು, ನಂತರ ಅವುಗಳನ್ನು ಶ್ರದ್ಧೆಯಿಂದ ಅಧ್ಯಯನ ಮಾಡಬೇಕು ಎಂದು ಪವಿತ್ರಾ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದ್ದಾರೆ.