ಪೆನ್ ಡ್ರೈವ್ ಹಗರಣ: ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.10: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ಪೆನ್ ಡ್ರೈವ್ ಹಗರಣವನ್ನು ಸಿ.ಬಿ.ಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿಂದು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶಾಸಕ ಹೆಚ್.ಟಿ.ಮಂಜು ಮತ್ತು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್ ನಾಯಕತ್ವದಲ್ಲಿ ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಜಮಾಯಿಸಿದ ಜೆಡಿಎಸ್ ಕಾರ್ಯಕರ್ತರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿ ಪ್ರತಿಕೃತಿ ದಹಿಸಿದರು. ಮಾನವ ಸರಪಳಿ ರಚಿಸಿ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಜೆಡಿಎಸ್ ಕಾರ್ಯಕರ್ತರು ಅಶ್ಲೀಲ ಸಿ.ಡಿ ಗಳನ್ನು ವ್ಯವಸ್ಥಿತವಾಗಿ ಹಂಚಿಕೆ ಮಾಡುವ ಮೂಲಕ ಮಹಿಳೆಯರ ಮಾನ ಹರಾಜು ಹಾಕಿದ್ದಾರೆಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ಭಾವಚಿತ್ರಗಳು ಮತ್ತು ಪ್ರತಿಕೃತಿಗಳಿಗೆ ಪೆÇರಕೆ ಸೇವೆ ಮಾಡಿದರು.
ಪ್ರತಿಭಟನಾ ನಿರತರನ್ನುದ್ದೇಶಿಸಿ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ಸಿ.ಡಿ ಹಂಚಿಕೆ ಮಾಡಿದವರ ವಿರುದ್ದ ಕ್ರಮ ಜರುಗಿಸುವಂತೆ ಒತ್ತಾಯಿಸಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಜೆಡಿಎಸ್ ಪಕ್ಷ ಎಂದೂ ಬೆಂಬಲಿಸುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಆದರೆ ಆಶ್ಲೀಲ ಸಿ.ಡಿ ಗಳನ್ನು ವ್ಯವಸ್ಥಿತವಾಗಿ ಹಂಚಿಕೆ ಮಾಡಿ ರಾಜ್ಯದ ಮಹಿಳೆಯರ ಮಾನವನ್ನು ದೇಶ ವಿದೇಶಗಳಲ್ಲಿ ಹರಾಜು ಹಾಕಿದವರಿಗೂ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು. ಮಹಿಳೆಯರ ಮಾನ ಹರಾಜು ಹಾಕಿದ್ದೇ ರಾಜ್ಯ ಸರ್ಕಾರ ಮಹಿಳೆಯರಿಗೆ ನೀಡಿದ ವಿಶೇಷ ಯೋಜನೆ ಎಂದು ರಾಜ್ಯ ಸರ್ಕಾರದ ಆಡಳಿತ ನೀತಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕ ಹೆಚ್.ಟಿ.ಮಂಜು ಹಳೇ ಮೈಸೂರು ಭಾಗದಲ್ಲಿ ಡಿ.ಕೆ.ಶಿವಕುಮಾರ್ ಅವರೇ ಜನರ ಬಳಿ ನನ್ನ ಕೈಗೆ ಪೆನ್ನು ಪೇಪರ್ ಕೊಡಿ ಎಂದು ಕೇಳುತ್ತಿದ್ದಿರಲ್ಲಾ, ಮಹಿಳೆಯರ ಮಾನ ಹರಾಜು ಹಾಕುವುದಕ್ಕಾಗಿ ನಿಮಗೆ ಪೆನ್ನು ಪೇಪರ್ ಬೇಕಾ? ನ್ಯಾಯಾಲಯದಿಂದ ಸಿ.ಡಿ.ಹಂಚಿಕೆ ಮಾಡದಂತೆ ತಡೆಯಾಜ್ಞೆಯಿದ್ದರೂ ನೀವು ಸಿ.ಡಿ.ಹಂಚಿಕೆ ಮಾಡಿಸಿದ್ದೀರಿ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ನಿಮ್ಮ ಸಹೋದರನ ಸೋಲಿನ ಭೀತಿಯಿಂದ ನೀವು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಮೇಲೆ ಮುಗಿಬಿದ್ದಿದ್ದೀರಿ. ನಿಮ್ಮ ಅನೈತಿಕ ರಾಜಕಾರಣ ಸಮಸ್ತ ಒಕ್ಕಲಿಗ ಸಮುದಾಯ ತಲೆತಗ್ಗಿಸುವಂತೆ ಮಾಡಿದೆ. ನಿಮ್ಮ ಶಿಖಂಡಿ ರಾಜಕಾರಣಕ್ಕೆ ನನ್ನ ಧಿಕ್ಕಾರವಿದೆ ಎಂದ ಶಾಸಕ ಹೆಚ್.ಟಿ.ಮಂಜು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ಯೋಗ್ಯತೆ ಜಿಲ್ಲೆಯ ಜನರಿಗೆ ಗೊತ್ತಿದೆ. ನಾಗಮಂಗಲದ ಜನ ಈಗಾಗಲೇ ಇವರನ್ನು ಕಸದ ಬುಟ್ಟಿಗೆ ಹಾಕಿದ್ದಾರೆಂದರು.
ಡಿ.ಕೆ.ಶಿವಕುಮಾರ್ ಅವರ ಪ್ರತಿಕೃತಿ ದಹಿಸಲು ಅಡ್ಡಿಪಡಿಸಿದ ಪೆÇಲೀಸರ ಬಗ್ಗೆಯೂ ಆಕ್ರೋಶ ಹೊರಹಾಕಿದ ಶಾಸಕರು ಡಿ.ಕೆ.ಶಿವಕುಮಾರ್ ಪ್ರತಿಕೃತಿ ದಹಿಸಲು ಹೋದರೆ ಅದನ್ನು ಕಿತ್ತುಕೊಳ್ಳಲು ಹೋಗುತ್ತೀರಿ. ಅದೇ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪ್ರತಿಕೃತಿ ದಹಿಸುತ್ತಿದ್ದರೆ ಸುಮ್ಮನೆ ನೋಡುತ್ತಾ ನಿಂತುಕೊಳ್ಳುತ್ತೀರಿ. ಪೆÇಲೀಸರೇ, ದೇವೇಗೌಡರು ನಿಮಗೆ ಮಾಡಿರುವ ದ್ರೋಹವಾದರೂ ಏನು? ದೇಶಕ್ಕೆ ದೇವೇಗೌಡರ ಕೊಡುಗೆಯಿಲ್ಲವೆ? ರಾಜ್ಯ ಸರ್ಕಾರದ ಎಸ್.ಐ.ಟಿ ತನಿಖೆಯ ಮೇಲೆ ನಮಗೆ ನಂಬಿಕೆಯಿಲ್ಲ. ಕಾಂಗ್ರೆಸ್ ಪಕ್ಷದ ನೀಚ ಮನಸ್ಥಿತಿಯ ರಾಜಕಾರಣಿಗಳಿಗೆ ಧಿಕ್ಕಾರವಿದೆ. ಸಿ.ಡಿ.ಹಂಚಿಕೆ ಮಾಡಿ ಮಹಿಳೆಯರ ಮಾನ ಹರಾಜು ಹಾಕಿದವರಿಗೂ ಶಿಕ್ಷೆಯಾಗಲೇಬೇಕು. ಅದಕ್ಕಾಗಿ ಸಿ.ಡಿ.ಹಂಚಿಕೆ ಪ್ರಕರಣ ಸೇರಿದಂತೆ ಮಹಿಳೆಯರ ಮೇಲಿನ ಎಲ್ಲಾ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನೂ ಸಿ.ಬಿ.ಐ ತನಿಖೆಗೆ ವಹಿಸುವಂತೆ ಒತ್ತಾಯಿಸಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್ ಮಾತನಾಡಿ ಲೈಂಗಿಕ ಹಗರಣದಲ್ಲಿ ಅಪರಾಧಿಗಳನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಆದರೆ ಅಧಿಕಾರ ಉಳಿಸಿಕೊಳ್ಳಲು ಹೆಣ್ಣು ಮಕ್ಕಳ ಮಾನವನ್ನು ಬಯಲು ಮಾಡಿದ ನೀಚ ರಾಜಕಾರಣಕ್ಕೆ ಜೆ.ಡಿ.ಎಸ್ ಪಕ್ಷದ ವಿರೋಧವಿದೆ. ಎಸ್.ಐ.ಟಿ ಸರ್ಕಾರದ ಕೈಗೊಂಬೆಯಾಗಿದ್ದು ಅದರಿಂದ ಪ್ರಮಾಣಿಕ ತನಿಖೆ ಸಾಧ್ಯವಿಲ್ಲ. ಪ್ರಕರಣವನ್ನು ಸಿ.ಬಿ.ಐ ತನಿಖೆಗೆ ಒಪ್ಪಿಸಬೇಕು. ಸಿ.ಡಿ.ಹಂಚಿಕೆ ಮಾಡಿ ಮಹಿಳೆಯರ ಮಾನವನ್ನು ಮಾರಾಟಕ್ಕಿಟ್ಟವರಿಗೆ ಶಿಕ್ಷೆಯಾಗಲೇಬೇಕಾಗಿದೆ. ರಾಜ್ಯದಲ್ಲಿ ತಲೆಹಿಡುಕ ರಾಜಕಾರಣ ನಿಲ್ಲಬೇಕು. ಇದಕ್ಕಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಸಿ.ಡಿ.ಹಂಚಿಕೆ ಸೇರಿದಂತೆ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ರಾಜ್ಯ ಸರ್ಕಾರ ಸಿ.ಬಿ.ಐ ತನಿಖೆಗೆ ಒಪ್ಪಿಸದಿದ್ದರೆ ಜೆ.ಡಿ.ಎಸ್ ಪಕ್ಷ ತನ್ನ ಚಳುವಳಿಯನ್ನು ಹೋಬಳಿ ಮತ್ತು ಗ್ರಾಮ ಪಂಚಾಯತಿ ಮಟ್ಟಕ್ಕೆ ತೆಗೆದುಕೊಂಡು ಹೋಗಲಿದೆ ಎಂದು ಎಚ್ಚರಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ, ಮನ್ ಮುಲ್ ನಿರ್ದೇಶಕ ಡಾಲು ರವಿ, ಮನ್ ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್, ಎಂ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ವಿ.ಎಸ್.ಧನಂಜಯಕುಮಾರ್, ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿದ್ದರು.