ಅ. 2ರಂದು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ
ವಿಜಯಪುರ,ಸೆ.22: ಜಿಲ್ಲಾಡಳಿತದ ವತಿಯಿಂದ ಅಕ್ಟೋಬರ್ 2ರಂದು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಅಚ್ಚುಕಟ್ಟಾಗಿ ಆಯೋಜಿಸಲು ನಿರ್ಧರಿಸಲಾಯಿತು.
ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಸಾರ್ವಜನಿಕರಿಗೆ ಮಹಾತ್ಮ ಗಾಂಧೀಜಿಯವರ ಬದುಕು, ಆದರ್ಶ ಹಾಗೂ ಅವರ ಜೀವನ ಸಂದೇಶದ ಅರಿವು ಮೂಡಿಸುವ ನಿಟ್ಟಿನಲ್ಲಿ ಅಕ್ಟೋಬರ್ 1 ರಂದು ಬೆಳಗ್ಗೆ 6.30ಕ್ಕೆ ಸೈನಿಕ ಶಾಲೆಯ ಎದುರಿಗೆ ಇರುವ ಲಾಲ್ ಬಹದೂರ ಶಾಸ್ತ್ರಿ ಪುತ್ಥಳಿಯಿಂದ ಅಲ್ಲಾಪೂರ ಓಣಿಯವರೆಗೆ ಸೈಕಲ್ ಜಾಥಾ ಕಾರ್ಯಕ್ರಮ ಹಾಗೂ ಅಲ್ಲಾಪೂರ ಓಣಿ ಹಾಗೂ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ, ಅಕ್ಟೋಬರ್ 2ರಂದು ಬೆಳಿಗ್ಗೆ 6.30ಕ್ಕೆ ತೊರವಿಯಲ್ಲಿ ಸ್ವಚ್ಚತಾ ಹಾಗೂ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ, ವಿವಿಧ ಸಂಘ ಸಂಸ್ಥೆಗಳು ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ತಿಳಿಸಿದರು.
ನಗರದ ಗಾಂಧಿ ಚೌಕದಲ್ಲಿರುವ ಗಾಂಧಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿ ಅವರ ಪುತ್ಥಳಿಗೆ ಮಾಲಾರ್ಪಣೆ, ಅಕ್ಟೋಬರ್ 2ರಂದು ಬೆಳಗ್ಗೆ 9.30ಕ್ಕೆ ನಗರದ ಜಿಲ್ಲಾ ಪಂಚಾಯತಿಯ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಈ ಮಹನೀಯರ ಜಯಂತಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಣಯಿಸಲಾಯಿತು.
ವೇದಿಕೆ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ, ಸರ್ವಧರ್ಮ ಪ್ರಾರ್ಥನೆ, ನಾಡಗೀತೆ, ಉಪನ್ಯಾಸ ಕಾರ್ಯಕ್ರಮ, ವಿವಿಧ ಶಾಲಾ ಮಕ್ಕಳಿಂದ ಛದ್ಮವೇಷ ಪ್ರದರ್ಶನ, ಗಾಂಧೀಜಿಯವರ ಪ್ರಿಯ ಹಾಡುಗಳ ಭಜನೆ ಕಾರ್ಯಕ್ರಮ ಆಯೋಜನೆ ಮಾಡಲು ನಿರ್ಧರಿಸಲಾಯಿತು.
ಮಹಾತ್ಮ ಗಾಂಧೀಜಿಯವರ 155ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ-ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾದ “ಬಾಪೂಜಿ ಪ್ರಬಂಧ ಸ್ಪರ್ಧೆ”ಯಲ್ಲಿ ವಿವಿಧ ವಿಭಾಗಗಳಲ್ಲಿ ತಲಾ 3 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಮಹಾತ್ಮಾ ಗಾಂಧೀಜಿ ಜಯಂತಿ ಸಮಾರಂಭದಲ್ಲಿ ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ಇಲಾಖೆಯಿಂದ ವಿತರಿಸಲು ಕ್ರಮ ವಹಿಸಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕÀ ಅಮರೇಶ ದೊಡಮನಿ ಸಭೆಗೆ ಮಾಹಿತಿ ನೀಡಿದರು.
ಗಾಂಧಿ ಜಯಂತಿ ಪ್ರಯುಕ್ತ ಜಿಲ್ಲೆಯಲ್ಲಿ ಮದ್ಯ ಹಾಗೂ ಮಾಂಸ ಮಾರಾಟ ನಿರ್ಬಧಿಸಿ ಕ್ರಮ ವಹಿಸುವುದಾಗಿ ಹಾಗೂ ಸೂಕ್ತ ಸುರಕ್ಷತೆ, ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು, ಜಿಲ್ಲೆಯ ಎಲ್ಲಾ ಶಾಲಾ, ಕಚೇರಿಗಳಲ್ಲಿ ಆಚರಣೆ ಮಾಡುವಂತೆಯೂ ಸೂಚಿಸಲಾಯಿತು. ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ಸಿ.ಬಿ. ದೇವರಮನಿ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕÀ ಮಲ್ಲಿಕಾರ್ಜುನ ಭಜಂತ್ರಿ, ಹಿಂದುಳಿದ ವರ್ಗಗಳ ಇಲಾಖೆಯ ಉಪನಿರ್ದೇಶಕÀ ಈರಣ್ಣ ಆಶಾಪೂರ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕÀ ಸಂತೋಷ ಭೋವಿ, ನಿಲೇಶ ಬೇನಾಳ, ಪೀಟರ್ ಅಲೆಕ್ಸಾಂಡರ್, ಫಯಾಜ್ ಕಲಾದಗಿ, ಅಡಿವೆಪ್ಪ ಸಾಲಗಲ್, ಭೀಮರಾಯ ಜಿಗಜಿಣಗಿ, ಸೋಮನಗೌಡ ಕಲ್ಲೂರ ಸೇರಿದಂತೆ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.