ಆತ್ಮವಿಶ್ವಾಸ ಸಾಧಿಸುವ ಛಲವಿದ್ದರೆ ನಿಮ್ಮ ಗುರಿ ಸಾಧನೆ ಸುಲಭ: ಶ್ರೀಕಾಂತ ಮಾಕಾಣಿ
ಅಥಣಿ : ಸೆ.22:ವಿದ್ಯಾರ್ಥಿಗಳು ಕಲಿಕೆಯ ಸಮಯವನ್ನು ವ್ಯರ್ಥ ಮಾಡದೆ ನಿರಂತರ ಅಭ್ಯಾಸವನ್ನು ಮಾಡಿ ಯಾರೂ ಕದಿಯದ ಜ್ಞಾನ ಸಂಪತ್ತನ್ನು ಸಂಪಾದಿಸಬೇಕು. ಜೀವನದಲ್ಲಿ ನಿರ್ದಿಷ್ಟವಾದ ಗುರಿಯನ್ನು ಇಟ್ಟುಕೊಂಡು ಆತ್ಮವಿಶ್ವಾಸದೊಂದಿಗೆ ಸಾಧಿಸುವ ಛಲವಿದ್ದರೆ ನಿಮ್ಮ ಗುರಿ ಸಾಧನೆಯ ಸುಲಭವಾಗುತ್ತದೆ ಎಂದು ನಿವೃತ್ತ ಅಭಿಯಂತರ ಶ್ರೀಕಾಂತ ಮಾಕಾಣೆ ಹೇಳಿದರು.
ಅವರು ಶನಿವಾರ ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಸರ್ಕಾರಿ ನೌಕರರ ವಿವಿಧ ಉದ್ದೇಶಗಳ ಸಹಕಾರಿ ಸಂಘದ 21ನೇ ವಾರ್ಷಿಕ ಸರ್ವಸಾಧಾರಣ ಸಭೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳ ತಿಮ್ಮ ಪುರಸ್ಕಾರ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ನಿರಂತರ ವಿದ್ಯಾಭ್ಯಾಸ ಮಾಡುವುದರ ಜೊತೆಗೆ ದೈಹಿಕ ಮತ್ತು ಮಾನಸಿಕ ಸದೃಢತೆಯನ್ನ ಕಾಪಾಡಿಕೊಳ್ಳಬೇಕು. ಮಕ್ಕಳ ಪಾಲಕರು ಕೂಡ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಕರೆಸಿಕೊಡಬೇಕು. ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸುವುದು ಒಂದೇ ಮಾನದಂಡವಲ್ಲ. ಅವರ ಮುಂದಿನ ಭವಿಷ್ಯ ಉಜ್ವಲವಾಗಲು ಒಳ್ಳೆಯ ಮಾರ್ಗದರ್ಶನ, ಆದರ್ಶ ಸಮಯ ಬದುಕು ಬಹಳ ಮುಖ್ಯವಾಗುತ್ತದೆ ಎಂದು ಹೇಳಿದ ಅವರು ಸರ್ಕಾರಿ ನೌಕರರ ಮಕ್ಕಳ ಸಾಧನೆಯನ್ನು ಗುರುತಿಸಿ ಸಹಕಾರಿ ಸಂಘದಿಂದ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಗೌರವಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಪ್ರತಿಭಾ ಪುರಸ್ಕಾರ ಸಾಧಕ ವಿದ್ಯಾರ್ಥಿಗಳಿಗೆ ಇನ್ನಷ್ಟು ಸ್ಪೂರ್ತಿ ತುಂಬುವುದಲ್ಲದೆ ಅನೇಕ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ ಎಂದು ಹೇಳಿದರು.
ಸರ್ಕಾರಿ ನೌಕರರ ವಿವಿಧ ಉದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಮೂಲಕ ತಮ್ಮೆಲ್ಲರ ಪ್ರೀತಿ ವಿಶ್ವಾಸ, ಸಲಹೆ ಮತ್ತು ಸಹಕಾರದೊಂದಿಗೆ ಸದಸ್ಯರ ಹಿತ ಕಾಪಾಡುವುದರ ಜೊತೆಗೆ ಸಂಘದ ಬೆಳವಣಿಗೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದು ಇತ್ತೀಚಿಗೆ ಸೇವೆಯಿಂದ ನಿವೃತ್ತಿ ಹೊಂದಿದ್ದೇನೆ. ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿ ಗೌರವಿಸಿರುವ ಸಹಕಾರಿ ಸಂಘದ ಎಲ್ಲಾ ಸದಸ್ಯರಿಗೆ ಚಿರಋಣಿಯಾಗಿದ್ದೇನೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವಿವಿಧ ಉದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷ ಮಲ್ಲಪ್ಪ ಮಗದುಮ ಮಾತನಾಡಿ ಅಥಣಿ ತಾಲೂಕಿನ ಎಲ್ಲಾ ಸರ್ಕಾರಿ ನೌಕರರ ಆರ್ಥಿಕ ಅಭಿವೃದ್ಧಿ ಉದ್ದೇಶದಿಂದ ಈ ಸಹಕಾರಿ ಸಂಘವನ್ನು 20 ವರ್ಷಗಳ ಹಿಂದೆಯೇ ಸ್ಥಾಪನೆ ಮಾಡಲಾಗಿದೆ. ನಮ್ಮ ಸಹಕಾರಿ ಸಂಘವು ರಾಷ್ಟ್ರೀಕೃತ ಬ್ಯಾಂಕುಗಳು ನೀಡುವ ಸೌಲಭ್ಯಗಳನ್ನೆಲ್ಲ ಸದಸ್ಯರಿಗೆ ನೀಡುತ್ತಿದ್ದು, ಸಂಪೂರ್ಣ ಡಿಜಿಟಲ್ ಸೇವೆಯನ್ನು ಒದಗಿಸುತ್ತಿರುವದು ಬಹಳಷ್ಟು ಅನುಕೂಲವಾಗಿದೆ ಎಂದು ಹೇಳಿದರು.
ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಚಿದಾನಂದ ಬಡವಗೋಳ ಪ್ರಸಕ್ತ ವರ್ಷದ ವರದಿ ವಾಚನವನ್ನು ಮಂಡಿಸುತ್ತಾ ಒಟ್ಟು 1985 ಸದಸ್ಯರ ಸಂಖ್ಯೆ ಹೊಂದಿರುವ ಈ ಸಹಕಾರಿ ಸಂಘವು 70 ಲಕ್ಷ 48 ಸಾವಿರ ಷೇರು ಬಂಡವಾಳ ಹೊಂದಿದೆ.38 ಕೋಟಿ 12 ಲಕ್ಷ ದುಡಿಯುವ ಬಂಡವಾಳ ಹೊಂದಿದೆ.ಸು. 10 ಕೋಟಿ 27 ಲಕ್ಷ ಸಾಲ ಸೌಲಭ್ಯ ವಿತರಿಸಲಾಗಿದೆ ಎಂದು ಹೇಳಿದರು.
ಈ ವೇಳೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ರಾಮಗೊಂಡ ಪಾಟೀಲ, ಅಭಿಯಂತರ ವೀರಣ್ಣ ವಾಲಿ, ಅರುಣ ಯಲಗುದ್ರಿ ಮಾತನಾಡಿದರು. ನಂತರ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ಸಹಕಾರಿ ಸಂಘದ ಸದಸ್ಯರನ್ನು ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸಾದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಅಭಿಯಂತರ ಜಯಾನಂದ ಹಿರೇಮಠ, ಶೇಖರ್ ಕರಬಸಪ್ಪಗೋಳ, ರಾಮಣ್ಣ ಧರಿಗೌಡರ, ಎಸ್. ಎ. ಮರನೂರ, ಗುರುನಾಥ ಸ್ವಾಮಿ, ಚಂದ್ರಕಾಂತ ಕಾಂಬಳೆ, ರವಿ ಅಂಗಡಿ, ಬೀರಪ್ಪ ಕಡಗಂಚಿ, ಸುಮಿತ್ರಾ ಮಗೇಣ್ಣವರ, ರೇಣುಕಾ ಗಾಣಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿಎಂ ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸುಮಿತ್ರಾ ಮಗೆಣ್ಣವರ ಸ್ವಾಗತಿಸಿದರು. ಎಸ್. ಎ ಸವದಿ ನಿರೂಪಿಸಿದರು. ಶಿವಗೌಡ ಪಾಟೀಲ ವಂದಿಸಿದರು.