ವಚನಗಳ ಅಳವಡಿಕೆಯಿಂದ ಬದುಕು ಸುಂದರ
ಕಲಬುರಗಿ:ಮೇ.09: ಬಸವಾದಿ ಶರಣರು ತಾವು ಮಾಡಿರುವ ಅಮೋಘವಾದ ಕಾರ್ಯವನ್ನು ಅನುಭವದ ರೂಪದಲ್ಲಿ ರಚಿಸಿರುವ ವಚನಗಳನ್ನು ಪ್ರತಿಯೊಬ್ಬರು ಅಧ್ಯಯನ ಮಾಡುವುದರ ಜೊತೆಗೆ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸುಂದರವಾಗಿ ರೂಪುಗೊಳ್ಳುತ್ತದೆಯೆಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಅಭಿಮತ ವ್ಯಕ್ತಪಡಿಸಿದರು.
ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿನ ‘ಶ್ರೀ ವಿವೇಕಾನಂದ ಕೋಚಿಂಗ್ ಸೆಂಟರ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ 891ನೇ ಬಸವ ಜಯಂತಿ ಪ್ರಯುಕ್ತ ಗುರುವಾರ ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ‘ವಚನ ಕಂಠಪಾಠ ಸ್ಪರ್ಧೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಚನಗಳಲ್ಲಿ ಸರ್ವ ಸಮಸ್ಯೆಗೂ ಪರಿಹಾರವಿದ್ದು, ವಿದ್ಯಾರ್ಥಿ ದೆಸೆಯಿಂದಲೇ ಅವುಗಳನ್ನು ಅಧ್ಯಯನ ಮಾಡಿ, ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ನಿಮ್ಮಲ್ಲಿ ಆತ್ಮ ವಿಶ್ವಾಸ, ಬದುಕುವ ಕಲೆ, ಸಾಧನೆಯ ಮಾರ್ಗ, ಜೀವನದ ವಾಸ್ತವಿಕತೆ, ಸಂಸ್ಕಾರ, ಮಾನವೀಯ ಮೌಲ್ಯಗಳು ಮೈಗೂಡಿ, ಉನ್ನತ ವ್ಯಕ್ತಿತ್ವ ನಿಮ್ಮದಾಗಲು ವಚನಗಳು ಪ್ರೇರಣೆ ನೀಡುತ್ತವೆಯೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಮುಖ್ಯಸ್ಥ ಬಸವರಾಜ ಮಳ್ಳಿ ಮಾತನಾಡಿ, ಮಾನವನ ಜೀವನದ ಸಾರ್ಥಕತೆಗೆ ವಚನಗಳು ಅವಶ್ಯಕವಾಗಿವೆ. ವಿದ್ಯಾರ್ಥಿ ದೆಸೆಯಿಂದಲೇ ವಚನ ಸಂಸ್ಕøತಿ ಮೈಗೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಲೇಖಕ ಶಿವಯೋಗೆಪ್ಪಾ ಎಸ್.ಬಿರಾದಾರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ಶಿಕ್ಷಕಿಯರಾದ ಭಾಗ್ಯಶ್ರೀ ಕಲ್ಲೂರ, ವಿಜಯಲಕ್ಷ್ಮಿ ನಾಲವಾರ, ಸುಜಾತಾ ಸೊನ್ನ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಚನ ಕಂಠಪಾಠ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಾದ ರಾಗಿಣಿ ಆರ್.ಹಿಪ್ಪರಗಿ(ಪ್ರಥಮ), ಕೀರ್ತಿ ಕೆ.ಸೋಲಾಪುರ(ದ್ವಿತೀಯ) ಮತ್ತು ಗಾಯತ್ರಿ ಎಸ್.ನಿಂಬರಗಿ ತೃತೀಯ ಸ್ಥಾನವನ್ನು ಪಡೆದು, ಬಹುಮಾನವನ್ನು ಸ್ವೀಕರಿಸಿದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಬಳಗದ ವತಿಯಿಂದ ಶರಣರ ವಚನಗಳ ಪುಸ್ತಕಗಳನ್ನು ನೀಡಿ, ಪ್ರೋತ್ಸಾಹಿಸಲಾಯಿತು.