ಕೆರೆ ಅಭಿವೃದ್ಧಿ ಪಡಿಸಿ, ಇಲಾಖೆಯ ಸುಪರ್ದಿಗೆ ಪಡೆದು ನೀರು ತುಂಬಿಸುವಂತೆ ಆಗ್ರಹ
ತಾಳಿಕೋಟೆ:ಮೇ.9: ಅಸ್ಕಿ, ಬೂದಿಹಾಳ.ಪಿ.ಟಿ, ಬೆಕಿನಾಳ ಹಾಗೂ ಹುಣಶ್ಯಾಳ ಗ್ರಾಮದ ಕೆರೆಯ ವ್ಯಾಪ್ತಿಯ ಜಮೀನ್ನನ್ನು ಇಲಾಖೆಯ ಸುಪರ್ದಿಗೆ ತೆಗೆದುಕೊಂಡು ಅದನ್ನು ಅಭಿವೃದ್ಧಿ ಪಡಿಸಿ ಕೆರೆ ನೀರು ತುಂಬಿಸಬೇಕು ಮತ್ತು ರೈತರ ಉತಾರೆಯಲ್ಲಿ ಜಮೀನನ್ನು ಕಡಿಮೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ತಾಲೂಕಾ ತಹಶಿಲ್ದಾರರಿಗೆ ಬುಧವಾರರಂದು ಮನವಿ ಸಲ್ಲಿಸಿ ಆಗ್ರಹಿಸಿದರು.
ನೇತೃತ್ವ ವಹಿಸಿದ್ದ ಜಿಲ್ಲಾಧ್ಯಕ್ಷರಾದ ಸಂಗಮೆಶ ಸಗರ ಅವರು ಮಾತನಾಡಿ ತಾಳಿಕೋಟೆ ತಾಲೂಕಿನ ಅಸ್ಕಿ, ಬೂದಿಹಾಳ.ಪಿ.ಟಿ, ಹುಣಶ್ಯಾಳ ಹಾಗೂ ಬೆಕಿನಾಳ ಗ್ರಾಮದಲ್ಲಿಯ ಕೆರೆಗಳು ಇಂದು ಅಕ್ಕಪಕ್ಕದ ರೈತರು ಅತಿಕ್ರಮಣ ಮಾಡಿಕೊಂಡು ಸಾರ್ವಜನಿಕರಿಗೆ ಹಾಗೂ ಜನಜಾನುವಾರುಗಳಿಗೆ ಅಲ್ಲಿ ನೀರು ಕುಡಿಯಲು ಹಾಗೂ ಬಳಸಲು ಬಿಡುತ್ತಿಲ್ಲ, ಕೇಳಿದರೆ ಇದು ನಮ್ಮ ಜಾಗ ನಮ್ಮ ಹೆಸರಲ್ಲಿ ಉತ್ತಾರೆಗಳಿವೆ ಎಂದು ದೊಡ್ಡ ಧ್ವನಿಯಲ್ಲಿ ಅಂಜಿಸುತ್ತಿದ್ದಾರೆ.
ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳ ವಿಕ್ಷಣೆ ಮಾಡಿ ಕೆರೆಯ ಒಟ್ಟು ಅಳತೆ ಮಾಡಿ ಅಕ್ರಮವಾಗಿ ಅತೀಕ್ರಮಣ ಮಾಡಿ ಸಾಗುವಳಿ ಮಾಡುತ್ತಿರುವವರನ್ನು ಅಲ್ಲಿಂದ ಖಾಲಿ ಮಾಡಿಸಿ, ಅಂತವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು, ಸಂಪೂರ್ಣ ಕೆರೆಯನ್ನು ಅಭಿವೃದ್ಧಿ ಪಡಿಸಬೇಕು, ಇಗಾಗಲೇ ಬರಗಾಲದಿಂದ ತತ್ತರಿಸಿರುವ ರೈತರಿಗೆ ಕೆರೆಯಿಂದ ಸಾಕಷ್ಟು ಅನುಕೂಲವಾಗಲಿದೆ, ಅಕ್ಕಪಕ್ಕದ ಬಾವಿ, ಕೊಳವೆ ಭಾವಿಯಲ್ಲಿ ನೀರು ಹೆಚ್ಚಾಗಿ ಕೃಷಿ ಮಾಡಲು ಮತ್ತು ಕುಡಿಯಲು ನೀರಿನ ಬಹುದೊಡ್ಡ ಸಹಾಯವಾಗುವುದು. ಆದ್ದರಿಂದ ಈ ಎಲ್ಲಾ ಕೆರೆಯನ್ನು ತುಂಬಿಸಬೇಕು. ಎಂದರು.
ರೈತ ಸಂಘದ ತಾಲೂಕಾ ಅಧ್ಯಕ್ಷರಾದ ಶ್ರೀಶೈಲ ವಾಲಿಕಾರ ಮಾತನಾಡಿ ಬೆಕಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟು ಇರುವುದರಿಂದ ಈಗಾಗಲೇ ಬೆಕಿನಾಳ ಗ್ರಾಮದ ಸರಕಾರಿ ಜಮೀನಿನಲ್ಲಿ ಶರಣಪ್ಪ ಕಟ್ಟಿಮನಿ ಇವರ ಬಾವಿಯಲ್ಲಿ ಸಾಕಷ್ಟು ನೀರು ಇದ್ದು, ಅಲ್ಲಿಂದ ಪೈಪಲೈನ ಮೂಲಕ ನೀರನ್ನು ಮನೆ ಮನೆಗೆ ಸರಬರಾಜು ಮಾಡಿದರೆ ನೀರಿನ ಸಮಸ್ಯೆ ಬಗೆಹರೆಯಲಿದೆ ಎಂದರು.
ಬೆಸಿಗೆಯ ತಾಪಮಾನದಿಂದ ಸಾಕಷ್ಟ ಸಮಸ್ಯೆ ಅನುಭವಿಸುವಂತಾಗಿದೆ, ಈ ವಿಷಯವನ್ನು ಅತೀ ಅವಶ್ಯಕ ಎಂದು ತಿಳಿದು ಶೀಘ್ರದಲ್ಲಿ ಸಂಪೂರ್ಣ ಕೆರೆ ಜಾಗವನ್ನು ಅಭಿವೃದ್ಧಿ ಪಡಿಸಿ ಕೆರೆ ತುಂಬುವ ಯೋಜನೆಯಡಿ ತುಂಬಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಆಗ್ರಹಿಸುತ್ತಾ ಇದ್ದೇವೆ, ಒಂದು ವೇಳೆ ವಿಳಂಭವಾದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಜಿಲ್ಲಾ ಅಧ್ಯಕ್ಷ ಸಂಗಮೇಶ ಸಗರ ಎಚ್ಚರಿಸಿದರು.
ಮನವಿ ಪತ್ರವನ್ನು ತಹಶಿಲ್ದಾರ ಕಾರ್ಯಾಲಯದ ಸಿಬ್ಬಂದಿ ಮುನ್ನಾ ಅತ್ತಾರ ಅವರಿಗೆ ಸಂಘದ ಪದಾಧಿಕಾರಿಗಳು ನೀಡಿದರು.
ಈ ಸಮಯದಲ್ಲಿ ಕಲಕೇರಿ ಹೊಬಳಿ ಅಧ್ಯಕ್ಷರಾದ ಮಹಿಬೂಬ ಬಾಷಾ ಮನಗೂಳಿ, ಬೆಕಿನಾಳ ಅಧ್ಯಕ್ಷರಾದ ದೇವಿಂದ್ರಪ್ಪಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.