ನಗರದಲ್ಲಿ ಕಾರು, ಬೈಕ್‍ಗಳ ಮಹಾ ರ್ಯಾಲಿ
ಬೀದರ್:ಮೇ.9: ಕರ್ನಾಟಕದ ಸಾಂಸ್ಕøತಿಕ ನಾಯಕ ಬಸವಣ್ಣನವರ ಜಯಂತಿ ಪ್ರಯುಕ್ತ ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ನಗರದಲ್ಲಿ ಬುಧವಾರ ಕಾರು ಹಾಗೂ ಬೈಕ್‍ಗಳ ಮಹಾ ರ್ಯಾಲಿ ನಡೆಯಿತು.
ಬಸವ ಭಕ್ತರು, ಬಸವಾನುಯಾಯಿಗಳು ಹಾಗೂ ಸಾರ್ವಜನಿಕರು ಪ್ರಖರ ಬಿಸಿಲಲ್ಲೇ ಕಾರು ಹಾಗೂ ಬೈಕ್‍ಗಳಲ್ಲಿ ಉತ್ಸಾಹದಿಂದ ರ್ಯಾಲಿಯಲ್ಲಿ ಪಾಲ್ಗೊಂಡರು.
ರ್ಯಾಲಿ ಉದ್ದಕ್ಕೂ ಷಟ್‍ಸ್ಥಲ ಧ್ವಜಗಳು ರಾರಾಜಿಸಿದವು. ಬಸವ ಜಯ ಘೋಷಗಳು ಮುಗಿಲು ಮುಟ್ಟಿದವು.
ನಗರದ ಮನ್ನಳ್ಳಿ ರಸ್ತೆಯಲ್ಲಿ ಇರುವ ಕರ್ನಾಟಕ ಫಾರ್ಮಸಿ ಕಾಲೇಜು ಆವರಣದಿಂದ ಆರಂಭಗೊಂಡ ರ್ಯಾಲಿಯು ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ರಾಮ ಚೌಕ್, ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತ, ಹರಳಯ್ಯ ವೃತ್ತ, ರೋಟರಿ ಕನ್ನಡಾಂಬೆ ವೃತ್ತ, ನೆಹರೂ ಕ್ರೀಡಾಂಗಣ, ಮಡಿವಾಳ ಮಾಚಿದೇವ ವೃತ್ತ, ಕೇಂದ್ರ ಬಸ್ ನಿಲ್ದಾಣ, ಪಾಪನಾಶ ಗೇಟ್, ಪ್ರತಾಪನಗರ ಮೂಲಕ ಹಾಯ್ದು ನೌಬಾದ್‍ಗೆ ತಲುಪಿತು. ಅಲ್ಲಿಯ ಬಸವೇಶ್ವರ ವೃತ್ತದಿಂದ ಮರಳಿ ಪಾಪನಾಶ ದೇಗುಲಕ್ಕೆ ಬಂದು ಸಮಾರೋಪಗೊಂಡಿತು.
ರ್ಯಾಲಿಯಲ್ಲಿ ಪಾಲ್ಗೊಂಡವರು ತಲೆ ಮೇಲೆ ಟೊಪ್ಪಿಗೆ, ಕೊರಳಲ್ಲಿ ಸ್ಕಾರ್ಪ್ ಧರಿಸಿದ್ದರು. ಕಾರು, ಬೈಕ್‍ಗಳಿಗೆ ಬಸವಣ್ಣನವರ ಚಿತ್ರ ಅಂಟಿಸಲಾಗಿತ್ತು. ಷಟ್‍ಸ್ಥಲ ಧ್ವಜಗಳನ್ನು ಕಟ್ಟಲಾಗಿತ್ತು. ತೆರೆದ ವಾಹನದಲ್ಲಿ ಬಸವಣ್ಣನವರ ಭಾವಚಿತ್ರ ಇಡಲಾಗಿತ್ತು.
ಬೈಕ್‍ಗಳು ಮುಂಚೂಣಿಯಲ್ಲಿದ್ದರೆ, ಕಾರುಗಳು ಅವುಗಳ ಹಿಂದೆ ಇದ್ದವು. ಪಾಪನಾಶ ದೇಗುಲದ ಪರಿಸರದಲ್ಲಿ ರ್ಯಾಲಿಯಲ್ಲಿ ಪಾಲ್ಗೊಂಡವರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಇದಕ್ಕೂ ಮುನ್ನ ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಅವರು ಷಟ್‍ಸ್ಥಲ ಧ್ವಜ ತೋರಿಸಿ ಕಾರು ಹಾಗೂ ಬೈಕ್ ರ್ಯಾಲಿಗೆ ಚಾಲನೆ ನೀಡಿದರು.
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಡಾ. ಗಂಗಾಂಬಿಕೆ ಅಕ್ಕ, ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಸುರೇಶ ಚನಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷ ಗಾದಗಿ, ಮುಖಂಡರಾದ ಬಿ.ಜಿ. ಶೆಟಕಾರ್, ರಾಜೇಂದ್ರಕುಮಾರ ಗಂದಗೆ, ಶರಣಪ್ಪ ಮಿಠಾರೆ, ದೀಪಕ್ ವಾಲಿ, ಬಸವರಾಜ ಪಾಟೀಲ ಹಾರೂರಗೇರಿ, ಶಿವಶಂಕರ ಟೋಕರೆ, ಶಶಿಧರ ಹೊಸಳ್ಳಿ, ವೀರಶೆಟ್ಟಿ ಪಾಟೀಲ, ಅರುಣ ಹೋತಪೇಟ್, ಆದೀಶ್ ವಾಲಿ, ವಿವೇಕ ವಾಲಿ, ವಿಜಯಕುಮಾರ ಪಾಟೀಲ, ಬಾಬುರಾವ್ ದಾನಿ, ಡಾ. ದೇವಕಿ ಅಶೋಕಕುಮಾರ ನಾಗೂರೆ, ಜಯದೇವಿ ಯದಲಾಪುರೆ, ಅಶೋಕ ದಿಡಗೆ, ಸಿದ್ಧಾರೂಢ ಭಾಲ್ಕೆ ಮೊದಲಾದವರು ಪಾಲ್ಗೊಂಡಿದ್ದರು.