ಇನ್ನೂ ಪತ್ತೆಯಾಗದ ಬಳ್ಳಾರಿಯ ಕರ್ನಾಟಕ  ಒನ್ ಕೇಂದ್ರದ  75 ಲಕ್ಷ ರೂ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.09: ಕಳೆದ ತಿಂಗಳು ಎಪ್ರಿಲ್ 28 ರಂದು ಇಲ್ಲಿನ ಮಹಾ ನಗರ ಪಾಲಿಕೆಯ ಆವರಣದಲ್ಲಿರುವ ಕರ್ನಾಟಕ ಒನ್  ಸಮಗ್ರ ನಾಗರೀಕ ಸೇವಾ ಕೇಂದ್ರದಲ್ಲಿ ಕಳ್ಳತನವಾದ 75 ಲಕ್ಷ ರೂ ನಗದು ಮತ್ತು ಸಿಸಿಟಿವಿಯ ಡಿವಿಆರ್ ಈ ವರೆಗೆ ಪತ್ತೆಯಾಗಿಲ್ಲ.
ಕಳ್ಳತನದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಗಾಂಧಿನಗರ ಠಾಣೆಯ ಪೊಲೀಸರು ತನಿಖಾ ಕಾರಗಯ ನಡೆಸಿದ್ದಾರೆ. ಚುನಾವಣೆ ಇದ್ದುದರಿಂದ ತನಿಖಾ ಕಾರ್ಯ ಒಂದಿಷ್ಟು ವಿಳಂಬ ವಾಗಿ ಮತ್ತೆ ಚುರುಕು ಪಡೆಯುವ ಸಾಧ್ಯತೆ ಇದೆ.
ಶುಕ್ರವಾರ, ಶನಿವಾರ, ಭಾನುವಾರ ಮೂರು ದಿನ   93 ಲಕ್ಷ ರೂ ಕಲೆಕ್ಷನ್ ಆಗಿತ್ತು. ಭಾನುವಾರ ರಾತ್ರಿ 75 ಲಕ್ಷ ರೂ ಕಳ್ಳತನವಾಗಿ 18 ಲಕ್ಷ ರೂ ನಗದು ಹಾಗೇ ಉಳಿದಿತ್ತು.
ಕಳೆದ 12 ವರ್ಷಗಳಿಂದ ಈ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂದ್ರಾಳಿನ ಮಹಾಲಿಂಗ ಎಂಬಾತನೇ ಭಾನುವಾರ ಕೊನೆಯಾದಾಗಿ ಬೀಗ ಹಾಕಿದ್ದಲ್ಲದೆ. ಅದನ್ನು ಈ ಮೊದಲಿನಂತೆ ಆತನೇ ಮನೆಗೆ ತೆಗೆದುಕೊಂಡು ಹೋಗಿದ್ದನಂತೆ.
ಮರು ದಿನ ಅಸತನೇ ಬಂದು  ಕಚೇರಿಯ ಬಿಗ ತೆರೆದಿದ್ದಾನೆ. ಆದರೆ ಕೇಂದ್ರದಲ್ಲಿನ 75 ಲಕ್ಷ ರೂ ಮಂಗಮಾಯವಾಗಿತ್ತಂತೆ. ಬಾಗಿಲು, ಬೀಗ ಮುರಿದಿಲ್ಲ, ಸಿಸಿ ಕೆಮೆರಾ ಹಾಳು ಮಾಡಿಲ್ಲ, ಆದರೆ ಸಿಸಿ ಕೆಮೆರಾಗಳ ಡಿವಿಆರ್ ಕದಿಯಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಶಂಕೆಯಿಂದ ಮಹಾಲಿಂಗ ಮತ್ತು ಆತನ ಸಂಬಂಧಿಕರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಆದರೆ ಅವರು ಈ ವರಗೆ ಕಳ್ಳತನದ ಬಗ್ಗೆ ತಮಗೇನು ತಿಳಿದಿಲ್ಲ ಎಂದೇ ಹೇಳುತ್ತಿದ್ದಾರಂತೆ.
ಪ್ರಕರಣಕ್ಕೆ ಸಂಬಂಧಿಸಿ ಈ ವರಗೆ ಯಾರನ್ನೂ ಬಂಧಿಸಿಲ್ಲವಂತೆ.
ಮಹಾಲಿಂಗ ಅವರಿಗೆ ನಾರ್ಕೋ ಅನ್ಯಾಲಿಸಿಸ್ (ಸುಳ್ಳು ಪತ್ತೆ ಯಂತ್ರದಿಂದ) ಪರೀಕ್ಷೆ ಮಾಡುವ ಬಗ್ಗೆ ಪೊಲೀಸರು ಚಿಂತನೆ ನಡೆಸಿದ್ದಾರಂತೆ.