ಮೇ.೧೨ ರಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಪಾರಂಪರಿಕ ಬೀಜೋತ್ಸವ
ಸಂಜೆವಾಣಿ ವಾರ್ತೆ
ದಾವಣಗೆರೆ. ಮೇ.೯; ದೇಸಿಯ ಬೀಜ ವೈವಿಧ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನಗರದ  ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಮೇ.೧೨ ರಂದು ಬೆಳಗ್ಗೆ ೯ ರಿಂದ ಸಂಜೆ ೬ ರವರೆಗೆ ಪಾರಂಪರಿಕ ಬೀಜೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಐಕಾಂತಿಕಾ ಸಂಸ್ಥೆಯ ರಾಘವ ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೀಜ ಎಂಬುದು ಬಿತ್ತನೆ ವಸ್ತುವಲ್ಲ ಅದು‌ಕೃಷಿಯ ಜೀವನಾಡಿ. ಅಕ್ಕಡಿ, ಮಿಶ್ರಬೆಳೆ, ನವಧಾನ್ಯದಂಥ ಹಲವು ವಿಶೇಷ ಪದ್ಧತಿಗಳ ಮೂಲಕ ಬೀಜ ವೈವಿಧ್ಯವನ್ನು ಜೀವಂತವಾಗಿ ಇರಿಸಿದ್ದಾರೆ.ಒಕ್ಕಲು ಮಕ್ಕಳ ಜೀವಾಳವಾಗಿರುವ ಬೀಜ ವೈವಿಧ್ಯಕ್ಕೆ ಧಕ್ಕೆ ಬಂದೊದಗಿದ್ದು, ಪ್ರಸ್ತುತ ಎದುರಾಗಿರುವ ಕೃಷಿ ಬಿಕ್ಕಟ್ಟನ್ನು ಎದುರಿಸಲು ಸಾಂಪ್ರದಾಯಿಕ ತಳಿಗಳಿಗೆ ಆದ್ಯತೆ ನೀಡಬೇಕಿದೆ. ದೇಸಿಯ ಬೀಜ ವೈವಿಧ್ಯದ ಮಹತ್ವದ ಬಗ್ಗೆ ರೈತರು ಮತ್ತು ಗ್ರಾಹಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಐಕಾಂತಿಕ ಮತ್ತು ಸಹಜ ಸಮೃದ್ಧ ಸಹಯೋಗದಲ್ಲಿ  ‘ಪಾರಂಪರಿಕ ಬೀಜೋತ್ಸವ’ ವನ್ನು ಆಯೋಜಿಸಲಾಗಿದೆ.ಸ್ಥಳೀಯ ಆಹಾರ ಸಂಸ್ಕೃತಿಗಳ ಪರಿಚಯ ಮಾಡಿಕೊಡುವ ಉದ್ದೇಶ ಹೊಂದಿದೆ. ಕರ್ನಾಟಕದ ಬೀಜ ಸಂರಕ್ಷಕರನ್ನೆಲ್ಲಾ ಒಂದೇ ವೇದಿಕೆಯಡಿ ತಂದು ‘ಕರ್ನಾಟಕ ಬೀಜ ಸಂರಕ್ಷಕರ ಬಳಗವನ್ನು’ ಹುಟ್ಟು ಹಾಕುವ ಕನಸು ನಮ್ಮದು ಎಂದರು.ಕರ್ನಾಟಕ ಬೀಜ ವೈವಿಧ್ಯದ ತಾಣ. ರತ್ನಚೂಡಿ, ರಾಜಮುಡಿ, ಆಲೂರು ಸಣ್ಣ, ಗಂಧಸಾಲೆಯಂತ ದೇಸಿ ಭತ್ತ, ಕರಿ ಕಡ್ಡಿ ರಾಗಿ, ಉಂಡೆ ರಾಗಿ, ಮಜ್ಜಿಗೆ ರಾಗಿ, ಕೆಂಪು ನವಣೆ, ಮಲ್ಲಿಗೆ ಸಾವೆ, ಕೊರಲೆನಂಥ ನೂರಾರು ಸಿರಿಧಾನ್ಯಗಳು, ಮಟ್ಟುಗುಳ್ಳ, ಈರಂಗೆರೆ ಬದನೆಗಳು. ಬ್ಯಾಡಗಿ ಮೆಣಸಿನಕಾಯಿ, ತಂಬೂರಿ ಸೋರೆ, ಮಂತು ಕುಂಬಳ, ಕಾಶಿ ಟೊಮೊಟೋದಂತ ತರಕಾರಿ, ಕೆಂಪು ಹಲಸು, ದೇವನಹಳ್ಳಿ ಚಕ್ಕೋತ, ಏಲಕ್ಕಿ, ರಸಬಾಳೆಯಂಥ ಹಣ್ಣಿನ ತಳಿಗಳು ಕನ್ನಡ ನಾಡಿನಲ್ಲಿ ನೆಲೆಯಾಗಿವೆ. ಕನ್ನಡ ನಾಡಿನ ಬೀಜ ವೈವಿಧ್ಯ ಎಣಿಕೆಗೆ ದಕ್ಕದಷ್ಟು ಆಗಾಧವಾಗಿದೆ.ವಾಣಿಜ್ಯ ಬೆಳೆಗಳ ಹಾವಳಿಯಿಂದ ಇಂಥ ಅಪರೂಪದ ಬೀಜ ವೈವಿಧ್ಯ ಕಣ್ಮರೆಯಾಗುತ್ತಿದೆ. ಪಂಡರಾಪುರ ಹತ್ತಿ, ಬ್ಯಾಡಗಿ ಕಡ್ಡಿ ಮೆಣಸು. ಹಾಲುಬ್ಬಲು, ಜೇನುಗೂಡು ರಾಗಿ. ಮರ ಸಜ್ಜೆಯಂಥ ನೂರಾರು ತಳಿಗಳು ನಾಶದ ಅಂಚಿನಲ್ಲಿವೆ. ಪೋಷಕಾಂಶಗಳ ಆಗರವಾದ, ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುವ. ಮಳೆ ವೈಪರಿತ್ಯವನ್ನು ಎದುರಿಸಿ ನಿಲ್ಲುವ ದೇಸಿ ತಳಿಗಳನ್ನು ಉಳಿಸಿ, ಬೆಳೆಸುವ ಆಗತ್ಯತೆ ಇದೆ ಎಂದರು.ಒಂದು ದಿನದ ಬೀಜ ಉತ್ಸವದಲ್ಲಿ ದೇಶದ ವಿವಿಧ ಭಾಗಗಳಿಂದ 30ಕ್ಕೂ ಹೆಚ್ಚಿನ ಬೀಜ ಸಂರಕ್ಷಕರ ಗುಂಪುಗಳು ಪಾಲ್ಗೊಳ್ಳಲಿವೆ. ವಿವಿಧ ದೇಸಿ ತಳಿಗಳನ್ನು ಬೀಜ ಮೇಳದಲ್ಲಿ ಪ್ರದರ್ಶಿಸಲಾಗುತ್ತಿದ್ದು. 1,000 ಕ್ಕೂ ಹೆಚ್ಚಿನ ದೇಸಿ ಧಾನ್ಯ, ಧಾನ್ಯ, ತರಕಾರಿ, ಕಾಳು, ಗೆಡ್ಡೆ ಗೆಣಸು, ಸೊಪ್ಪು ಮತ್ತು ಹಣ್ಣಿನ ತಳಿಗಳು ಪ್ರದರ್ಶನಕ್ಕೆ ಬರುತ್ತಿವೆ. ಗುಣ ಮಟ್ಟದ ಭತ್ತ, ಸಿರಿಧಾನ್ಯ ಮತ್ತು ತರಕಾರಿ ಬೀಜಗಳು ಮಾರಾಟಕ್ಕೆ ಸಿಗಲಿವೆ. ಕೆಂಪು ಬಣ್ಣದ ‘ಸಿದ್ಧ ಹಲಸು’ ಮತ್ತು ಇತರೆ ಹಣ್ಣಿನ ಗಿಡಗಳು ಮಾರಾಟಕ್ಕೆ ಲಭ್ಯವಿರುತ್ತವೆ. ರೈತ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಭತ್ತದ ತಳಿಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಕೋಲಾರದ ಬೀಜಮಾತೆ ಶ್ರೀಮತಿ ಪಾಪಮ್ಮ ಅವರು ಮತ್ತು  ಪ್ರಧಾನ ಮಂತ್ರಿಗಳಿಂದ ಸನ್ಮಾನಿತರಾದ ಮೈಸೂರಿನ ಬೀಜಮಾತೆ ಶ್ರೀಮತಿ ಪದ್ಮಾವತಮ್ಮ  ‘ಪಾರಂಪರಿಕ ಬೀಜೋತ್ಸವ’ ವನ್ನು ಉದ್ಘಾಟಿಸಲಿದ್ದಾರೆ.ವಿವಿಧ ಸಾವಯವ ಮಳಿಗೆಗಳು, ರೈತ ಉತ್ಪಾದಕರ ಗುಂಪುಗಳು ಬೇಳೆ ಕಾಳುಗಳು, ಹಣ್ಣು ಹಂಪಲು ಮಾರಾಟಕ್ಕೆ ತರಲಿದೆ ಅಪರೂಪದ ಬೀಜ, ಹಣ್ಣು, ಕಾಯಿ ಸೇರಿದಂತೆ ಕೃಷಿ ವೈವಿಧ್ಯದ ಉತ್ಪನ್ನಗಳು ಪ್ರದರ್ಶನಕ್ಕೆ ಬರಲಿದೆ. ನೈಸರ್ಗಿಕವಾಗಿ ಬೆಳೆದ ಮಾವು ಮಾರಾಟಕ್ಕೆ ಬರುತ್ತಿದೆ, ಬೀಜ ಉತ್ಸವದ ಅಂಗವಾಗಿ ನಗರದ ಪರಿಸರ ಪ್ರಿಯರಿಗಾಗಿ ‘ನಮ್ಮ ತೋಟದಿಂದ ನಮ್ಮ ಊಟ’ ಕಾರ್ಯಕ್ರಮ ಏರ್ಪಾಡಾಗಿದೆ ಹಾಗೆಯೇ, ದಾವಣಗೆರೆ ನಗರದ ಕೈತೋಟ ಆಸಕ್ತರನ್ನು ಒಗ್ಗೂಡಿಸಿ, ‘ಪೌಷ್ಟಿಕ ಕೈತೋಟ ಒಕ್ಕೂಟ’ ರಚನೆ ಆಗಲಿದೆ.ತೆನೆ ತೋರಣ, ಕೃಷಿ ಆಚರಣೆಗಳ ಪ್ರದರ್ಶನ ಮತ್ತು ರೈತ ವಿಜ್ಞಾನಿಗಳ ಅನುಭವ ಹಂಚಿಕೆ ಇರುತ್ತದೆ. ರಾಜ್ಯದ ವಿವಿಧ ಭಾಗಗಳಿಂದ ಬರುವ ಬೀಜ ಸಂರಕ್ಷಕರು ಪರಸ್ಪರ ಕಲೆತು. ಚರ್ಚಿಸಿ ರಾಜ್ಯ ಮಟ್ಟದ ಬೀಜ ಸಂರಕ್ಷಕರ ಒಕ್ಕೂಟಕ್ಕೆ ಚಾಲನೆ ನೀಡಲಿದ್ದಾರೆ ಎಂದರು.ಹೆಚ್ವಿನ ಮಾಹಿತಿಗಾಗಿ ಮೊ; 9743140939,8867202370 ಇಲ್ಲಿಗೆ ಸಂಪರ್ಕಿಸಬಹುದಾಗಿದೆ.ಸುದ್ದಿಗೋಷ್ಠಿಯಲ್ಲಿ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ದೇವರಾಜ ಟಿ.ಎನ್,ಸಹಜ ಕೃಷಿಕರಾದ ಹನುಮಂತಪ್ಪ,ಸುಜಿತ್ ಕುಮಾರ್,ಅಭಿಷೇಕ್,ಸುಪ್ರಿಯಾ ಉಪಸ್ಥಿತರಿದ್ದರು.