ಕನ್ನಡ ಸಾಹಿತ್ಯ ಸಂಸ್ಥಾಪನಾ ದಿನ ಆಚರಣೆ
ವಿಜಯಪುರ,ಮೇ೯:ಪಟ್ಟಣದ ಯಲುವಹಳ್ಳಿ ರಸ್ತೆಯಲ್ಲಿರುವ ಸ್ವಾಮಿ ವಿವೇಕಾನಂದ ಐ.ಟಿ.ಐ.ಕಾಲೇಜಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬುಧವಾರ ತಾಲ್ಲೂಕು ಅಧ್ಯಕ್ಷ ನಂಜೇಗೌಡ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ ಆಯೋಜನೆ ಮಾಡಲಾಗಿತ್ತು.
ತಾಲ್ಲೂಕು ಕಸಾಪ ಘಟಕದ ಅಧ್ಯಕ್ಷ ನಂಜೇಗೌಡ ಮಾತನಾಡಿ, ಸಾಹಿತ್ಯ ಪರಿಷತ್ತಿನ ಕೆಲಸ ಮಾಡಲು ಸಾಹಿತಿಗಳೇ ಆಗಬೇಕೆಂದೆನೂ ಇಲ್ಲ. ಕನ್ನಡ ಓದು ಬರಹ ಬರುವವರು ಯಾರು ಬೇಕಾದರೂ ಸಾಹಿತ್ಯ ಪರಿಷತ್ತಿನಲ್ಲಿ ಕೆಲಸ ಮಾಡಬಹುದು. ಪ್ರತಿಯೊಬ್ಬರೂ ಕನ್ನಡ ಭಾಷೆಗೆ ಪ್ರೋತ್ಸಾಹ ನೀಡಬೇಕು. ಒಂದು ಸಂಸ್ಥೆ ಹುಟ್ಟು ಹಾಕಬೇಕಾ ದರೆ ಸಾಕಷ್ಟು ಕಷ್ಟನಷ್ಟಗಳನ್ನು ಎದುರಿಸಬೇಕಾಗಿದೆ. ಬಹುತೇಕ ಸಂಸ್ಥೆಗಳು ಸ್ಥಾಪನೆಯಾದ ಕೆಲವೇ ದಿನಗಳಲ್ಲಿ ಇಲ್ಲವೇ ಐದತ್ತು ವರ್ಷ ಗಳಲ್ಲಿ ಮುಚ್ಚಿಹೋಗುತ್ತವೆ. ಸಾಹಿತಿ ಗಳು, ಬುದ್ದಿಜೀವಿಗಳೆಲ್ಲರೂ ಹುಟ್ಟು ಹಾಕಿರುವ ಸಾಹಿತ್ಯ ಪರಿಷತ್ತು ನೂರು ವರ್ಷ ಪೂರೈಸಿ ಗಟ್ಟಿಯಾಗಿ ನಿಂತಿದೆ ಅದನ್ನು ಮುನ್ನಡೆಸಿಕೊಂಡು ಹೋಗುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.
ಹಿರಿಯ ರಂಗಕಲಾವಿದ ರಬ್ಬನಹಳ್ಳಿ ಕೆಂಪಣ್ಣ ಮಾತನಾಡಿ, ಕನ್ನಡ ಭಾಷೆಯ ಹಿರಿಮೆಯನ್ನು ಜಗತ್ತಿಗೆ ಸಾರಬೇಕು, ಇಲ್ಲಿನ ಕವಿಗಳು, ಸಾಹಿತಿಗಳು, ಲೇಖಕರು, ದಾಸರು, ಶರಣರು ಹೀಗೆ ಎಲ್ಲಾ ವಿಭಾಗಗಳಲ್ಲಿನ ಮಹನೀಯರನ್ನು ಪ್ರಪಂಚಕ್ಕೆ ಪರಿಚಯಿಸಬೇಕು ಎನ್ನುವ ನಿಟ್ಟಿನಲ್ಲಿ ಹುಟ್ಟುಹಾಕಿದ ಸಾಹಿತ್ಯ ಪರಿಷತ್ತು, ಅನೇಕ ಸವಾಲುಗಳ ನಡುವೆ, ಮುನ್ನಡೆಯುತ್ತಿದೆ. ಇಂತಹ ಉತ್ತಮ ಸಂಸ್ಥೆಯನ್ನು ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ.ವಿಶ್ವೇಶ್ವರಯ್ಯ, ಹಾಗೂ ಸರ್.ಮಿರ್ಜಾ ಇಸ್ಮಾಯಿಲ್ ಅವರನ್ನು ನಾವೆಲ್ಲರೂ ನೆನೆಯಬೇಕಿದೆ. ಮಮ್ಮಿ, ಡ್ಯಾಡಿ ಸಂಸ್ಕೃತಿಯಿಂದ ಅಪ್ಪ, ಅಮ್ಮನ ಸಂಸ್ಕೃತಿಗೆ ಮರಳಬೇಕಿದೆ ಎಂದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿ, ಯುವಜನರು ಕನ್ನಡಾಭಿಮಾನವನ್ನು ಬೆಳೆಸಿಕೊಂಡು, ಮುಂದಿನ ಪೀಳಿಗೆಗೆ ಕನ್ನಡ ಭಾಷೆ, ಸಾಹಿತ್ಯ ಮಹತ್ವವನ್ನು ತಿಳಿಸುವ ಕೆಲಸ ಮಾಡಬೇಕು ಎಂದರು.
ಜಾನಪದ ಕಲಾವಿದ ಹೊಸಹಳ್ಳಿ ವಾಸುದೇವ್ ಅವರು ಜಾನಪದ ಗೀತೆಗಳನ್ನು ಹಾಡುವ ಮೂಲಕ ಎಲ್ಲರನ್ನೂ ರಂಜಿಸಿದರು.
ತಾಲ್ಲೂಕು ಕಲಾವಿದರ ಸಂಘದ ಅಧ್ಯಕ್ಷ ಮೋಹನ್ ಬಾಬು, ತಾಲ್ಲೂಕು ಕಸಾಪ ಕಾರ್ಯದರ್ಶಿ ಎ.ಬಿ.ಪರಮೇಶಯ್ಯ, ಸ್ವಾಮಿ ವಿವೇಕಾನಂದ ಐ.ಟಿ.ಐ.ಕಾಲೇಜಿನ ಪ್ರಾಂಶುಪಾಲ ಶ್ರೀನಾಥ್, ಅಶ್ವಥಗೌಡ, ಮುನಿವೆಂಕಟರಮಣಪ್ಪ, ಸುಭ್ರಮಣಿ, ಜೆ.ಆರ್.ಮುನಿವೀರಣ್ಣ, ಕನಕರಾಜು, ಶರಣಯ್ಯ ಹಿರೇಮಠ, ಬೈರೇಗೌಡ, ಶಿಕ್ಷಕರಾದ ರಾಜಶೇಖರಾಚಾರ್, ಹಾಜರಿದ್ದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಬಸವದಳದ ಹಿರಿಯ ಶರಣರಾದ i ಜಯದೇವ್,ಹಾಗೂ ಬೇಕರಿ ಶಿವಣ್ಣ ಮತ್ತು ಸ್ವಾಮಿ ವಿವೇಕಾನಂದ ಐಟಿಐ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ್ ಲೇಖಕ ಶ್ರೀನಿವಾಸಮೂರ್ತಿರವರನ್ನು ಸನ್ಮಾನಿಸಲಾಯಿತು