ಪೆನ್ ಡ್ರೈವ್ ಪ್ರಕರಣ ಸಿಬಿಐಗೆವಹಿಸಲು ಆಗ್ರಹಿಸಿ ಪ್ರತಿಭಟನೆ
ಸಂಜೆವಾಣಿ ನ್ಯೂಸ್
ಮೈಸೂರು: ಮೇ.09:- ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಪೆನ್‍ಡ್ರೈವ್ ವಿಡಿಯೋ ಪ್ರಕರಣವನ್ನು ಸಿಬಿಐಗೆ ವಹಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬಕ್ಕೆ ಚ್ಯುತಿ ತರಲು ಮುಂದಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ಜಾತ್ಯತೀತ ಜನತ ದಳದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಹಳೆ ಮೈಮುಲ್ ಮುಂಭಾಗ ಶಾಸಕ ಜಿ.ಟಿ.ದೇವೇಗೌಡ, ಮಾಜಿ ಸಚಿವ ಸಾ.ರಾ.ಮಹೇಶ್ ಅವರ ನೇತೃತ್ವದಲ್ಲಿ ಜಮಾವಣೆಗೊಂಡ ಜೆಡಿಎಸ್‍ನ ನೂರಾರು ಕಾರ್ಯಕರ್ತರು ವಿವಿಧ ಘೋಷಣೆಗಳನ್ನು ಕೂಗುತ್ತ ಹೊಸ ಜಿಲ್ಲಾಧಿಕಾರಿರವರೆಗೆ ಮೆರವಣಿಗೆ ನಡೆಸಿದರು.
ಹಾಸನ ಜಿಲ್ಲಾದ್ಯಾಂತ ಮಹಿಳೆಯ ಅಶ್ಲೀಲ ಚಿತ್ರಗಳನ್ನು ಒಳಗೊಂಡ ಪೆನ್‍ಡ್ರೈವ್ ಹಂಚುವ ಆರೋಪಕ್ಕೆ ಒಳಗಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡುವಂತೆ ಆಗ್ರಹಿಸಿದರು. ಹಾಸನ ವಿಡೀಯೋ ಪ್ರಕರಣದಲ್ಲಿ ಮಹಿಳೆಯರ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯದ ಬಗ್ಗೆ ರಾಜ್ಯ ಸರ್ಕಾರ ಈಗಾಗಲೇ ವಿಶೇಷ ತನಿಖಾ ದಳ (ಎಸ್‍ಐಟಿ) ವಹಿಸಿರುವುದನ್ನು ಜೆಡಿಎಸ್ ಸ್ವಾಗತಾರ್ಹ. ಆದರೆ, ಎಸ್‍ಐಟಿ ತನಿಖೆಯಲ್ಲಿ ರಾಜ್ಯ ಸರ್ಕಾರ ಅಸ್ತಕ್ಷೇಪ ಮಾಡುತ್ತಿದೆ. ಇದರಿಂದ ನಿಷಪಕ್ಷಪಾತವಾಗಿ ತನಿಖೆ ನಡೆಯುವ ಸಂಶಯ ಮೂಡಿದೆ ಎಂದು ದೂರಿದರು.
ಈ ಅಶ್ಲೀಲ ವಿಡಿಯೋಗಳನ್ನು ಪೆನ್‍ಡ್ರೈವ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜ್ಯಾದಾದ್ಯಂತ ಹಂಚಿದ್ದಾರೆಂದು ಬಿಜೆಪಿ ಮುಖಂಡರೂ ಆದ ವಕೀಲ ದೇವರಾಜೇಗೌಡ ಜಾಗ ಜಾಹೀರು ಮಾಡಿದ್ದು, ಈ ಇಬ್ಬರು ನಾಯಕರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬಕ್ಕೆ ಚುತಿ ತರಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಪ್ರಕರಣದಲ್ಲಿ ತಪ್ಪು ಮಾಡಿದ್ದಾನೆ ಎನ್ನುವವರು ಎಷ್ಟು ಅಪರಾಧಿಯೋ, ಅದನ್ನು ಹಂಚಿದವರೂ ಅಷ್ಟೇ ಅಪರಾಧಿಗಳು ಎಂದು ಪರೋಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದರು.
ವಿಡಿಯೋ ಹಂಚಿದವರ ವಿರುದ್ಧ ಸರ್ಕಾರ ಯಾಕಿನ್ನು ಕ್ರಮ ಕೈಗೊಂಡಿಲ್ಲ. ಚೆನ್ನೈ ಕಂಪನಿ ಒಂದರಲ್ಲಿ ಕೋಟ್ಯಾಂತರ ಹಣ ಖರ್ಚು ಮಾಡಿ ಪೆನ್‍ಡ್ರೈವ್ ಖರೀದಿಸಿದ್ದಾರೆ. ಬೇರೆಡೆ ಅದಕ್ಕೆ ವೀಡಿಯೋ ಅಪ್‍ಲೋಡ್ ಮಾಡುವ ಕೆಲಸ ಆಗಿದೆ. ಪ್ರಾದೇಶಿಕ ಪಕ್ಷ ಜೆಡಿಎಸ್ ಅನ್ನು ಮುಗಿಸಲು ವ್ಯವಸ್ಥಿತ ಪಿತೂರಿಯಿಂದ ಇಂತಹ ನೀಚ ರಾಜಕಾರಣ ಮಾಡಲಾಗಿದೆ ಎಂದು ಕಿಡಿಕಾರಿದರು.
ಪೆನ್‍ಡ್ರೈವ್‍ನಲ್ಲಿ ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಬಿತ್ತರಿಸುವ ಮೂಲಕ ಮಹಿಳೆಯ ಮಾನ ಹರಾಜು ಮಾಡಲಾಗಿದೆ. ಎಸ್‍ಐಟಿಯನ್ನು ರಾಜ್ಯದ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ. ಕೂಡಲೇ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಸರ್ಕಾರ ಎಸ್‍ಐಟಿಗೆ ವಹಿಸದಿದ್ದರೆ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿಯಾದರೂ ಸಿಬಿಐಗೆ ವಹಿಸುವಂತೆ ಮಾಡುತ್ತೇವೆ ಎಂದು ಹೇಳಿದರು.
ಮಾಜಿ ಸಚಿವ ಸಾ.ರಾ.ಮಹೇಶ ಮಾತನಾಡಿ, ವಕೀಲ ದೇವರಾಜೇಗೌಡ ಹೇಳಿರುವಂತೆ ವಿಶೇಷ ತನಿಖಾ ದಳ ನಡೆಸುತ್ತಿರುವ ತನಿಖಾ ವಿಧಾನ ಗಮನಿಸಿದರೇ, ಈ ವಿಡೀಯೋ ಪ್ರಕರಣದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ನೇರವಾದ ಹಸ್ತಕ್ಷೇಪವಿರುವುದು ಎದ್ದು ಕಾಣುತ್ತದೆ. ಈ ಕಾರಣಗಳಿಂದ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳದಿಂದ ನಿಕ್ಷಪಕ್ಷಪಾತವಾದ ತನಿಖೆ ಆಸಾಧ್ಯ ಎಂದರು.
ಶಾಸಕ ಜಿ.ಡಿ.ಹರೀಶ್‍ಗೌಡ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಶಾಸಕರಾದ ಕೆ.ಮಹದೇವು, ಅಶ್ವಿನ್ ಕುಮಾರ್, ಜೆಡಿಎಸ್ ನಗರಾಧ್ಯಕ್ಷ ಚೆಲುವೇಗೌಡ, ಮಾಜಿ ಮಹಾಪೌರ ಲಿಂಗಪ್ಪ, ಎಂ.ಜೆ. ರವಿಕುಮಾರ್, ನಗರಪಾಲಿಕೆ ಮಾಜಿ ಸದಸ್ಯರಾದ ಕೆ.ವಿ.ಶ್ರೀಧರ್, ಪ್ರೇಮಾಶಂಕರೇಗೌಡ ಸೇರಿ ಅನೇಕರು ಪ್ರತಿಭಟನೆಯಲ್ಲಿ ಹಾಜರಿದ್ದರು.