ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ: ಗ್ರಾಮಸ್ಥರ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.09: ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿ ಬೀರುವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಬೀಕನಹಳ್ಳಿ ಗ್ರಾಮದಲ್ಲಿ ಕಳೆದ 11 ತಿಂಗಳ ಹಿಂದೆ ಪ್ರತಿಷ್ಟಾಪನೆ ಮಾಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಕಿಡಿಗೇಡಿಗಳು ಹಾನಿಮಾಡಿ ವಿರೂಪಗೊಳಿಸಿದ್ದು ತಕ್ಷಣವೇ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ.
ಬೀಕನಹಳ್ಳಿ ಗ್ರಾಮದ ಶ್ರೀ ಸಂಗೊಳ್ಳಿ ರಾಯಣ್ಣ ಯುವ ಬ್ರಿಗೇಡ್ ಯುವಕರು ಮತ್ತು ಗ್ರಾಮಸ್ಥರ ಸಹಕಾರದಿಂದ ರಾಯಣ್ಣ ಪ್ರತಿಮೆಯನ್ನು ನಿರ್ಮಿಸಿ ಗ್ರಾಮದಲ್ಲಿ ದಿನಾಂಕ 18-6-2023 ರಂದು ಪ್ರತಿಷ್ಠಾಪಿಸಲಾಗಿತ್ತು. ಗ್ರಾಮದಲ್ಲಿನ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಮಂಗಳವಾರ ತಡರಾತ್ರಿ ಕಿಡಿಗೇಡಿಗಳು ಸಂಗೊಳ್ಳಿ ರಾಯಣ್ಣನ ಕತ್ತಿ. ಕೈ. ಕಾಲು ಸೇರಿದಂತೆ ವಿವಿಧ ಭಾಗದಲ್ಲಿ ಹಾನಿಗೊಳಿಸಿ ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ.
ಪ್ರತಿಮೆ ವಿರೂಪಗೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣಗೊಂಡಿತು.ಈ ಘಟನೆಯನ್ನು ಕುರಿತು ಮಾತನಾಡಿದ ಗ್ರಾಮಸ್ಥರು ಸರ್ವ ಸಮುದಾಯದ ನಾಯಕ ಮತ್ತು ಸ್ವಾತ್ಯಂತ್ರಕ್ಕಾಗಿ ಹೋರಾಡಿದ ದೇಶಭಕ್ತ ಶ್ರೀ ಸಂಗೊಳ್ಳಿ ರಾಯಣ್ಣನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂಬ ದೂರ ದೃಷ್ಟಿಯಿಂದ ಗ್ರಾಮದ ಯುವಕರು ರಾಯಣ್ಣ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದರು. ನಮ್ಮ ಗ್ರಾಮದಲ್ಲಿ ನಿರ್ಮಾಣಗೊಂಡಿದ್ದ ಶ್ರೀ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಯಾರೋ ಕಿಡಿಗೇಡಿಗಳು ತಡರಾತ್ರಿ ರಾಯಣ್ಣನ ಕತ್ತಿ ಮತ್ತು ಕಾಲು. ಕೈ ಭಾಗಕ್ಕೆ ಹಾನಿಗೊಳಿಸಿ ವಿಕೃತಿ ಮೆರೆದಿದ್ದಾರೆ. ದೇಶಕ್ಕಾಗಿ ಬಲಿದಾನವಾದ ಮಹನೀಯರ ಮೇಲೆ ವಿಕೃತಿ ಮೆರೆದಿರುವ ದುಷ್ಕರ್ಮಿಗಳನ್ನು ಪೆÇೀಲೀಸರು ಶೀಘ್ರವೇ ಬಂಧಿಸಬೇಕು.
ರಾಯಣ್ಣನಂತಹ ಮಹನೀಯರು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ರಾಯಣ್ಣ ರಾಜ್ಯದಲ್ಲಿ ಹಲವು ಕಡೆ ಕಿಡಿಗೇಡಿಗಳು ರಾಯಣ್ಣನ ಪ್ರತಿಮೆಯನ್ನು ಹಾನಿಗೊಳಿಸಿ ಅವಮಾನಗೊಳಿಸಿದ್ದಾರೆ. ಇದು ರಾಯಣ್ಣನಂತಹ ಅಪ್ರತಿಮ ದೇಶಭಕ್ತನ ಹೋರಾಟಕ್ಕೆ ಮಾಡುತ್ತಿರುವ ಅಪಮಾನ.ಈ ಹಿಂದೆ ನಾಡಿನ ವಿವಿದೆಡೆ ರಾಯಣ್ಣನ ಪ್ರತಿಮೆಗೆ ಹಾನಿಯಾದಾಗ ರಾಜ್ಯ ಸರ್ಕಾರ ಆ ಸಂದರ್ಭದಲ್ಲಿ ಘಟನೆಗೆ ಕಾರಣರಾದ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಠಿಣ ಕ್ರಮ ಜರುಗಿಸಿದ್ದರೆ ನಮ್ಮ ಗ್ರಾಮದಲ್ಲಿ ಈ ಘಟನೆ ಜರುಗುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಈ ಘಟನೆಗೆ ಕಾರಣರಾದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿ ತಿಳಿಯುತ್ತಿದ್ದಂತೆಯೇ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡದೊಂದಿಗೆ ಗ್ರಾಮಂತರ ಪೆÇಲೀಸ್ ಠಾಣೆಯ ಇನ್ಸ್ಪೆಕ್ಟರ್ ಆನಂದೇಗೌಡ ನೇತೃತ್ವದ ತಂಡ ಸ್ಥಳಕ್ಕಾಗಮಿಸಿ ಪರಿಶೀಲಿಸಿ ಮುಂದಿನ ತನಿಖೆ ಕೈಗೊಂಡು ಶೀಘ್ರವೇ ಆರೋಪಿಯನ್ನು ಬಂಧಿಸುವ ಭರವಸೆಯನ್ನು ನೀಡಿದ್ದಾರೆ.