ಗುಣಾತ್ಮಕ ಶಿಕ್ಷಣ ನಮ್ಮ ಮೊದಲ ಆದ್ಯತೆ:ನಡುವಿನಮನಿ
ತಾಳಿಕೋಟಿ :ಮೇ.9: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬುದು ನಮ್ಮ ಮೊದಲ ಧ್ಯೇಯವಾಗಿದೆ ಎಂದು ಮೈಲೇಶ್ವರ ಮಾರುತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾನಾಗೌಡ ನಡುವಿನಮನಿ ಹೇಳಿದರು.
ತಾಲ್ಲೂಕಿನ ಮೈಲೇಶ್ವರ ಬ್ರಿಲಿಯಂಟ್ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಯೂನಿಕ್ ಟ್ಯಾಲೆಂಟ್ ಅವಾರ್ಡ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.
ನೀಟ್,ಕೆಸಿಇಟಿ,ಜೆಇಇಯಂತ ತರಬೇತಿ ನೀಡುವ ಉದ್ದೇಶದಿಂದ ಸಮಾನ ಮನಸ್ಕರನ್ನು ಒಳಗೊಂಡ ಯೂನಿಕ್ ಪಿಯು ಸೈನ್ಸ್ ಕಾಲೇಜನ್ನು ಮೂಕಿಹಾಳದ ಸಮೀಪದಲ್ಲಿ ನಿರ್ಮಿಸಲಾಗಿದ್ದು ಎಲ್ಲ ಸೌಲಭ್ಯಗಳನ್ನು ಈಗಾಗಲೇ ಒದಗಿಸಿದ್ದು ಕಾಲೇಜು ಆರಂಭಿಸಲಾಗುತ್ತಿದೆ.ನಮ್ಮ ಭಾಗದಲ್ಲೂ ಉತ್ತಮ ಸೌಲಭ್ಯ ಹೊಂದಿದ ಕಾಲೇಜು ಇದ್ದು ವಿದ್ಯಾರ್ಥಿಗಳು ದೂರ ಹುಬ್ಬಳ್ಳಿ,ಬೆಂಗಳೂರು ಭಾಗದಲ್ಲಿ ತಿರುಗಾಡದೇ ನಮ್ಮಲ್ಲಿಯೇ ಗುಣಾತ್ಮಕ ತರಬೇತಿಯನ್ನು ಪಡೆಯುವ ಸೌಲಭ್ಯ ಒದಗಿಸುವ ಉದ್ದೇಶ ಹೊಂದಿದ್ದೇವೆ ಎಂದರು.
ಸಂಸ್ಥೆಯ ನಿರ್ದೇಶಕ ಶಿವನಗೌಡ ಪಾಟೀಲ್ ಮಾತನಾಡಿ, ತಾಳಿಕೋಟಿ ತಾಲ್ಲೂಕಿನ ಬ್ರಿಲಿಯಂಟ್ ಶಿಕ್ಷಣ ಸಂಸ್ಥೆ ಈಗಾಗಲೇ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿಭಾಗದಲ್ಲಿ ವಿದ್ಯಾರ್ಥಿಗಳು,ಪಾಲಕರ ಮೆಚ್ಚಿನ ಸಂಸ್ಥೆಯಾಗಿ ಮುನ್ನಡೆದಿದೆ.ತಾಳಿಕೋಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಯೂನಿಕ್ ಪಿಯು ಸೈನ್ಸ್ ಕಾಲೇಜು ಆರಂಭಿಸಲಾಗಿದೆ.ಮೂರು ವರ್ಷಗಳಲ್ಲಿ ಮೆಡಿಕಲ್ ಸೀಟು ಪಡೆದುಕೊಳ್ಳುವ ಸಾಧನೆ ಈ ಕಾಲೇಜು ಮಾಡಲಿದೆ ಎಂದು ಹೇಳಿದರು.
ಹುಬ್ಬಳ್ಳಿ ಸುಕೃತಿ ಕಾಲೇಜಿನ ಅಧ್ಯಕ್ಷ ಜಗದೀಶ ಶೆಟ್ಟರ್ ಮಾತನಾಡಿ, ಯಾವುದೇ ಕಾಲೇಜು ಆರಂಭಗೊಂಡ ತಕ್ಷಣ ಫಲಿತಾಂಶದ ಬಗ್ಗೆ ಗಮನ ಕೊಡುವುದು ಸಹಜ.ಆದರೆ ಮೂರು ವರ್ಷಗಳ ಅವಧಿಯಲ್ಲಿ ಈ ಭಾಗದಲ್ಲಿ ತಲೆ ಎತ್ತಿ ನಿಂತಿರುವ ಯೂನಿಕ್ ಪಿಯು ಸೈನ್ಸ್ ಕಾಲೇಜು ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್ ಸೀಟು ಗಿಟ್ಟಿಸಿಕೊಳ್ಳುವ ಸಾಧನೆ ತೋರಲಿದ್ದಾರೆ ಎಂದರು.
ಹುಬ್ಬಳ್ಳಿ ಮೈಲ್ ಅಕಾಡೆಮಿಯ ದೀಪಕ್ ಹಿರೇಮಠ, ಉಪನ್ಯಾಸಕಿ ಪ್ರತಿಭಾ ಪ್ರಕಾಶ ಮಾತನಾಡಿದರು.ಸಂಸ್ಥೆಯ ಸದಸ್ಯರಾದ ಮಲ್ಲಿಕಾರ್ಜುನ ಮಡಿವಾಳರ,ಮಲ್ಲನಗೌಡ ಮೂಲಿಮನಿ,ಪ್ರಮುಖರಾದ ಆರ್.ಬಿ.ಧಮ್ಮೂರಮಠ,ಅಶೋಕ ಹಂಚಲಿ,ಪಿ.ಎಚ್.ಸುರಪೂರ ಇದ್ದರು.ಟ್ಯಾಲೆಂಟ್ ಅವಾರ್ಡ ಪರೀಕ್ಷೆಯಲ್ಲಿ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿ ಶರತ ಗಬಸಾವಳಗಿ ಪ್ರಥಮ,ಶ್ರೀಶೈಲರೆಡ್ಡಿ ಪೊಲೀಸಪಾಟೀಲ್ ದ್ವಿತೀಯ ಸ್ಥಾನ ಪಡೆದುಕೊಂಡರು.ಗುಂಡುರಾವ ಧನಪಾಲ ನಿರೂಪಿಸಿದರು.