ವಿಶ್ವದ ಅಭಿವೃದ್ಧಿಗೆ ರೆಡ್‍ಕ್ರಾಸ್ ಸಂಸ್ಥೆಯ ಕೊಡುಗೆ ಅನನ್ಯ
ಕಲಬುರಗಿ: ಮೇ.8:ಸಮಾಜದಲ್ಲಿ ಕಂಡುಬರುವ ವಿವಿಧ ಸಮಸ್ಯೆಗಳಿಗೆ ಪರಿಹಾರ, ನೈಸರ್ಗಿಕ ವಿಪತ್ತುಗಳ ನಿರ್ವಹಣೆ, ಜನಜಾಗೃತಿ ಕಾರ್ಯಕ್ರಮ, ತೊಂದರೆಯಲ್ಲಿರುವ ಜನರಿಗೆ ಸಹಾಯ ಸೇರಿದಂತೆ ವಿಶ್ವದಾದ್ಯಂತ ಅನೇಕ ಜನಪರ ಕಾರ್ಯಗಳನ್ನು ಮಾಡುವ ಮೂಲಕ ವಿಶ್ವದ ಅಭಿವೃದ್ಧಿಯಲ್ಲಿ ರೆಡ್ ಕ್ರಾಸ್ ಸಂಸ್ಥೆಯು ತನ್ನದೇ ಆದ ಅನನ್ಯವಾದ ಕೊಡುಗೆಯನ್ನು ನೀಡುತ್ತಿದೆ ಎಂದು ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಅಜೀವ ಸದಸ್ಯ, ಸಮಾಜ ಸೇವಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಏರ್ಪಡಿಸಿದ್ದ ‘ವಿಶ್ವ ರೆಡ್ ಕ್ರಾಸ್ ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ಈ ಸಂಸ್ಥೆಯು ಶಾಂತಿ ಕಾಪಾಡುವುದು, ಗಾಯಗೊಂಡ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವುದು, ಆಕಸ್ಮಿಕ ಮರಣದ ಪ್ರಮಾಣವನ್ನು ತಗ್ಗಿಸುವುದು, ಸಮುದಾಯದ ಅಭಿವೃದ್ಧಿಯಲ್ಲಿ ತೊಡಗುವ ಮೂಲಕ ಸಬಲೀಕರಣವನ್ನು ಮಾಡುವು ಕಾರ್ಯಗಳನ್ನು ಮಾಡುತ್ತಿದೆ. ಇದು ವಿಶ್ವದ ದೊಡ್ಡ ಸೇವಾ ಸಂಸ್ಥೆಯಾಗಿದೆ. ಹೆನ್ರಿ ಡುನಾಂಟ್ ಅವರ ದೂರದೃಷ್ಠಿಯ ಫಲವೇ ಈ ಸಂಸ್ಥೆಯ ಉಗಮಕ್ಕೆ ಕಾರಣವಾಗಿದ್ದು, ಅವರ ಜನ್ಮದಿನಾಚರಣೆಯ ಸ್ಮರಣೆಗಾಗಿ ಈ ದಿನವನ್ನು ಆಚರಿಸಲಾಗುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯು ಯುದ್ಧಪೀಡಿತ ಸಂದರ್ಭದಲ್ಲಿ ಕಂಡುಬರುವ ಜೀವಹಾನಿಯನ್ನು ತಪ್ಪಿಸಲು ಪ್ರಯತ್ನಿಸುತ್ತದೆ. ಸಂಸ್ಥೆಯ ಸೇವೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಅದರ ಕೊಡುಗೆ ಮರೆಯುವಂತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಕಂಪ್ಯೂಟರ ಶಿಕ್ಷಕಿ ಪ್ರಿಯಾಂಕಾ ಉಜಳಂಬಿ, ನಿಲೊಫರ್ ಶೇಖ್, ಪ್ರಮುಖರಾದ ಬೀರಪ್ಪ ಘೋಟಕೆ, ರಾಕೇಶ್ ಚವ್ಹಾಣ ಸೇರಿದಂತೆ ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.