ಮತ ಚಲಾಯಿಸಿದ ಪೂಜ್ಯರು, ಗಣ್ಯರುತಾಲೂಕಿನಾದ್ಯಂತ ಬಿರುಸಿನ ಮತದಾನ
ಭಾಲ್ಕಿ:ಮೇ.8:ಬೀದರ್ ಲೋಕಸಭಾ ಕ್ಷೇತ್ರದ ಚುನಾವಣೆಗೆ ತಾಲೂಕಿನಾದ್ಯಂತ ಮಂಗಳವಾರ ಬಿರುಸಿನ ಮತದಾನ ನಡೆಯಿತು. ಪಟ್ಟಣದ 28 ಮತಗಟ್ಟೆ ಸೇರಿ ತಾಲೂಕಿನ ಒಟ್ಟು 263 ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನ ಸಂಜೆ 6ರ ವರೆಗೂ ಸೂಸುತ್ರವಾಗಿ ನಡೆಯಿತು.
ಬೆಳಿಗ್ಗೆ 11 ಗಂಟೆ ವರೆಗೂ ಬಹುತೇಕ ಮತಗಟ್ಟೆಗಳಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಮತದಾನ ಮಾಡುತ್ತಿರುವ ದೃಶ್ಯ ಕಂಡು ಬಂತು. ಮಧ್ಯಾಹ್ನ 12 ಗಂಟೆಯಿಂದ ಸಾಯಂಕಾಲ 4ಗಂಟೆ ವರೆಗೂ ಬಿಸಿಲಿನ ಪ್ರಖರತೆ ಹೆಚ್ಚಿದ ಹಿನ್ನೆಲೆಯಲ್ಲಿ ಕೆಲ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ವಿರಳವಾಗಿ ಕಂಡು ಬಂತು.
ನಂತರ ಬಿರುಸು ಪಡೆದ ಮತದಾನ ಸಂಜೆ 6ರ ವರೆಗೂ ನಡೆಯಿತು. ಹಿರಿಯರು, ವೃದ್ಧರು, ಕಾರ್, ಬೈಕ್ ಮೇಲೆ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಅಂಗವಿಕಲರು ಕುಟುಂಬದ ಸದಸ್ಯರ ಸಹಾಯದೊಂದಿಗೆ ವ್ಹಿಲ್‍ಚೇರ್ ಮೇಲೆ ಬಂದು ತಮ್ಮ ಹಕ್ಕು ಚಲಾಯಿಸಿದರು.
ಎಲ್ಲಿಯು ಮತಯಂತ್ರ ಕೈಕೊಟ್ಟಿರುವ ಬಗ್ಗೆ ವರದಿಯಾಗಿಲ್ಲ. ಅಲ್ಲಲ್ಲಿ ಸಣ್ಣಪುಟ್ಟ ಘಟನೆಗಳು ನಡೆದಿದ್ದು ಬಿಟ್ಟರೆ ಬಹುತೇಕ ಮತದಾನ ಶಾಂತಿಯುತವಾಗಿ ನಡೆಯಿತು. ಬಿಸಿಲಿನ ಪ್ರಖರತೆ ಹಿನ್ನೆಲೆಯಲ್ಲಿ ಬಹುತೇಕ ಮತಗಟ್ಟೆಗಳಲ್ಲಿ ನೆರಳಿನ ವ್ಯವಸ್ಥೆ ಮಾಡಲಾಗಿತ್ತು.
ಹಳೇ ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ 114ರ ಮತಗಟ್ಟೆಯಲ್ಲಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಮಹಾಲಿಂಗ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ ಮತ ಚಲಾಯಿಸಿದರು.
ತಾಲೂಕಿನ ಸಿದ್ದೇಶ್ವರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಸಿದ್ರಾಮಪ್ಪ ಕನಕಟ್ಟೆ ಅವರು ಪರಿವಾರ ಸಮೇತ ಮತ ಚಲಾಯಿಸಿ ಮತದಾನದ ಮಹತ್ವ ಸಾರಿದರು.