ಬಿರು ಬಿಸಿಲಿನಲ್ಲಿ ನಡೆದ ಶಾಂತಿಯುತ ಮತದಾನ:ಶೇ. 65.33 ಪ್ರತಿಶತ ಮತದಾನ
ಅಫಜಲಪುರ:ಮೇ.8: 2024 ರ ಲೋಕಸಭೆಯ ಸಾರ್ವತ್ರಿಕ ಚುನಾವಣೆ ಅಂಗವಾಗಿ ರಾಜ್ಯದಲ್ಲಿ ನಡೆದ 2ನೇ ಹಂತದ ಸಂಸದೀಯ ಚುನಾವಣೆ ಹಿನ್ನೆಲೆ ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಅಫಜಲಪುರ ಮತಕ್ಷೇತ್ರದ ಹಲವೆಡೆ ಮಂಗಳವಾರ ಶಾಂತಿಯುತ ಮತದಾನ ನಡೆಯಿತು.
251 ಮತಗಟ್ಟೆಗಳಲ್ಲಿ ಒಟ್ಟು ಮತದಾರರ ಸಂಖ್ಯೆ 2 ಲಕ್ಷ 37 ಸಾವಿರ 292 ಆಗಿದ್ದು, ಅದರಲ್ಲಿ ಪುರುಷ ಮತದಾರರು 1 ಲಕ್ಷ 21 ಸಾವಿರ 355 ಹಾಗೂ ಮಹಿಳಾ ಮತದಾರರು 11 ಲಕ್ಷ 5 ಸಾವಿರ 917 ಆಗಿದ್ದು ಇತರೆ 20 ಮತದಾರರು ಆಗಿದ್ದಾರೆ. ಇವರಲ್ಲಿ ಪುರುಷ ಮತದಾರರು 80 ಸಾವಿರ 832 ಮತ ಚಲಾವಣೆ ಮಾಡಿದ್ದರೆ, ಮಹಿಳಾ ಮತದಾರರು 74 ಸಾವಿರ 198 ತಮ್ಮ ಹಕ್ಕು ಚಲಾಯಿಸಿದ್ದು ಇತರೆ 4 ಜನ ಮತ ಚಲಾಯಿಸಿ ಒಟ್ಟು 1 ಲಕ್ಷ 55 ಸಾವಿರದ 34 ಮತಗಳು ಚಲಾವಣೆಯಾಗಿ ಶೇ. 65.33% ರಷ್ಟು ಪ್ರತಿಶತ ಮತದಾನ ನಡೆದಿದೆ.
44 ಡಿಗ್ರಿ ಸೆಲ್ಸಿಯಸ್ ನಷ್ಟು ಬಿರು ಬಿಸಿಲನ್ನು ಲೆಕ್ಕಿಸದ ಮತದಾರರು ಸರದಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ತಮ್ಮ ಮತದಾನದ ಹಕ್ಕು ಚಲಾಯಿಸಿದರು. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆದ ಮತದಾನ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಯಿತು.
ಹಾಗೂ ಚುನಾವಣೆ ಸುಸೂತ್ರವಾಗಿ ನಡೆಯಲು ಸಹಾಯಕ ಚುನಾವಣಾ ಅಧಿಕಾರಿ ಜಾವೀದ್ ಕರಂಗಿ, ನೋಡಲ್ ಅಧಿಕಾರಿ ರಾಮಚಂದ್ರ ಗಡದೆ, ತಹಸೀಲ್ದಾರ ಸಂಜೀವಕುಮಾರ ದಾಸರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ನೋಡಿಕೊಂಡರು. ಸಿಪಿಐ ಚನ್ನಯ್ಯ ಹಿರೇಮಠ ನೇತೃತ್ವದ ಖಾಕಿ ಪಡೆಯು ಮತದಾನ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಭದ್ರತೆ ಒದಗಿಸಿದರು.
ಒಟ್ಟಾರೆ ಕಲಬುರಗಿ ಲೋಕಸಭಾ ಚುನಾವಣಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ 8 ಮತ ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಶೇಕಡವಾರು ಫಲಿತಾಂಶದಲ್ಲಿ ಸೇಡಂ ಮೊದಲ ಸ್ಥಾನ, ಅಫಜಲಪುರ ದ್ವಿತೀಯ ಹಾಗೂ ಕಲಬುರಗಿ ದಕ್ಷಿಣ ಮತಕ್ಷೇತ್ರ ಕೊನೆಯ ಸ್ಥಾನ ಪಡೆದುಕೊಂಡಿದೆ.
ಒಟ್ಟಿನಲ್ಲಿ ಕಾಂಗ್ರೆಸ್ ಗ್ಯಾರಂಟಿ ಹಾಗೂ ಮೋದಿ ಗ್ಯಾರಂಟಿಗಳ ಭರ್ಜರಿ ಅಬ್ಬರದ ಪ್ರಚಾರಗಳ ನಡುವೆ ಅಂತಿಮವಾಗಿ ಮತದಾರನು ಯಾರ ಕೈ ಹಿಡಿಯುವನೆಂದು ಜೂನ್ 4 ರವರೆಗೆ ಕಾದು ನೋಡಬೇಕಿದೆ.